ಅಂತರಾಷ್ಟ್ರೀಯ

ಪಾಕ್‌ನೊಂದಿಗೆ ಮಾತುಕತೆಗೆ ಸಿದ್ಧ; ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ

Pinterest LinkedIn Tumblr

Modi at UN

ವಿಶ್ವಸಂಸ್ಥೆ, ಸೆ.27: ಎಲ್ಲರೂ ಬಹುನಿರೀಕ್ಷೆಯಿಂದ ಕಾಯುತ್ತಿದ್ದಂತೆ ಶನಿವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ತನ್ನ ಚೊಚ್ಚಲ ಭಾಷಣವನ್ನು ಮಾಡಿದರು.

ಭಾರತೀಯ ಕಾಲಮಾನ ರಾತ್ರಿ 8:17ರ ವೇಳೆಗೆ ಮೋದಿಯವರು ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಭಾಷಣವನ್ನು ಪ್ರಾರಂಭಿಸಿದರು. ಮೋದಿಯವರು ಭಾಷಣವನ್ನು ಹಿಂದಿಯಲ್ಲಿ ಪ್ರಾರಂಭಿಸಿದರು. ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ದೊರೆತಿರುವುದು ತನಗೆ ಸಂದ ಗೌರವವೆಂದು ಭಾವಿಸುವುದಾಗಿ ಅವರು ಹೇಳಿದರು.

ಪಶ್ಚಿಮ ಏಶ್ಯದಲ್ಲಿ ಭಯೋತ್ಪಾದನೆ ಮರುಕಳಿಕೆ, ಭದ್ರತಾ ಮಂಡಳಿ ಒಳಗೊಂಡಂತೆ ವಿಶ್ವಸಂಸ್ಥೆಯ ಸುಧಾರಣೆ ಹಾಗೂ ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಮಾತುಕತೆಯ ಅಗತ್ಯ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ತನ್ನ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದ್ದಾರೆ.

‘‘ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ತತ್ವಶಾಸ್ತ್ರವನ್ನು ಹೊಂದಿರುತ್ತದೆ. ನಾನು ಸಿದ್ಧಾಂತದ ಬಗ್ಗೆ ಮಾತನಾಡುತ್ತಿಲ್ಲ. ಈ ತತ್ವಶಾಸ್ತ್ರವು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತದೆ. ಭಾರತದ ತತ್ವಶಾಸ್ತ್ರದಡಿ ಅದು ‘ವಸುಧೈವ ಕುಟುಂಬಕಂ’ (ವಿಶ್ವವೇ ಕುಟುಂಬ) ಆಗಿದೆ’’ ಎಂದವರು ನುಡಿದರು.

ಇಂದಿಲ್ಲಿ 193 ರಾಷ್ಟ್ರಗಳ ಧ್ವಜಗಳು ಹಾರುತ್ತಿವೆ. ನಾವು ಕಳೆದ ದಶಕಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ ಎಂದವರು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘‘ಭಯೋತ್ಪಾದನೆಯ ನೆರಳಿಲ್ಲದ ಶಾಂತಿಯುತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ’’ ಎಂದು ಹೇಳಿದ್ದಾರೆ. ಸೂಕ್ತ ವಾತಾವರಣವನ್ನು ನಿರ್ಮಿಸುವುದು ಮತ್ತು ದ್ವಿಪಕ್ಷೀಯ ಮಾತುಕತೆಗೆ ಮುಂದೆ ಬರುವುದು ಕೂಡಾ ಪಾಕ್‌ಗೆ ಬಿಟ್ಟುದುದಾಗಿದೆ ಎಂದವರು ಹೇಳಿದ್ದಾರೆ.

ಭಯೋತ್ಪಾದನೆಯ ಹೊಸ ರೂಪಗಳಲ್ಲಿ ಕಂಡು ಬರುತ್ತಿದೆ ಮತ್ತು ಯಾವುದೇ ರಾಷ್ಟ್ರವು ಇದರಿಂದ ಮುಕ್ತವಾಗಿಲ್ಲ ಎಂದವರು ಹೇಳಿದರು.

ವಿಶ್ವಸಂಸ್ಥೆಯ ಅದ್ಭುತ ವೇದಿಕೆಯೊಂದು ನಮಗಿರುವಾಗ ಹಲವು ‘ಜಿ’ ಗುಂಪುಗಳ ಅಗತ್ಯ ನಮಗೇಕೆ ಎಂದವರು ಇದೇ ವೇಳೆ ಪ್ರಶ್ನಿಸಿದರು.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಇನ್ನಷ್ಟು ಬಲಪಡಿಸುವಂತೆ ಇದೇ ವೇಳೆ ಅವರು ಕರೆ ನೀಡಿದರು. ಜಗತ್ತಿನ ಲಕ್ಷಾಂತರ ಜನರನ್ನು ಕಾಡುತ್ತಿರುವ ಮೂಲಭೂತ ಶೌಚಾಲಯಗಳ ಕೊರತೆ, ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವದ ಬಗ್ಗೆಯೂ ಅವರು ಇದೇ ವೇಳೆ ವಿಷಾದಿಸಿದರು.

ಯೋಗದ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು ‘‘ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ನಾವು ಚಿಂತಿಸಬೇಕಾಗಿದೆ’’ ಎಂದರು. ಪಾಕ್‌ನೊಂದಿಗೆ ಸಂಧಾನಕ್ಕೆ ಸಿದ್ಧ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮೋದಿ ಹೇಳಿದರು.

2015ರೊಳಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಾಗಬೇಕು ಎಂದು ತನ್ನ ಭಾಷಣದ ಕೊನೆಯಲ್ಲಿ ಮೋದಿ ಆಶಿಸಿದರು. ‘ನಮಸ್ತೆ’ ಎಂಬ ಪದದೊಂದಿಗೆ ಮೋದಿ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾಡಿದ ತನ್ನ ಭಾಷಣವನ್ನು ಕೊನೆಗೊಳಿಸಿದರು.

Write A Comment