ಅಂತರಾಷ್ಟ್ರೀಯ

9/11 ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Pinterest LinkedIn Tumblr

modi18

ನ್ಯೂಯಾರ್ಕ್, ಸೆ.27: ಐದು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ 2001ರ ಸೆಪ್ಟಂಬರ್ 11ರಂದು ಭಯೋತ್ಪಾದಕ ದಾಳಿಗೆ ತುತ್ತಾದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಸ್ಮಾರಕಕ್ಕೆ ಭೇಟಿ ನೀಡಿ ಮೃತರಿಗೆ ಗೌರವ ಸಲ್ಲಿಸಿದರು. ಬಿಳಿತೋಳಿನ ಕುರ್ತಾ ಧರಿಸಿ ತನ್ನ ಎಡ ಭುಜದ ಮೇಲೆ ಬೂದು ಬಣ್ಣದ ಶಾಲು ಹೊದ್ದು ಆಗಮಿಸಿದ ಮೋದಿ, ಕಂದು ಬಣ್ಣದ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿರುವ ಸ್ಮಾರಕದ ಮುಂದೆ ಕೆಲ ನಿಮಿಷಗಳ ಕಾಲ ವೌನ ಆಚರಿಸಿದರು.

ಭಾರತ ಸೇರಿದಂತೆ ಅಮೆರಿಕದ ಸಾವಿರಾರು ಮಂದಿ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದರು. ಅವರ ಸ್ಮರಣಾರ್ಥ ಬಲಿಯಾದವರ ಹೆಸರುಗಳನ್ನು ಕೆತ್ತಲಾಗಿದ್ದು, ಸ್ಮಾರಕದ ಮೇಲೆ ಒಂದೊಂದಾಗಿ ಹಳದಿ ಬಣ್ಣದ ಹೂಗಳನ್ನು ಇಟ್ಟು ಮೋದಿ ಗೌರವ ಸಲ್ಲಿಸಿದರು. 9/11ರ ಸ್ಮಾರಕಕ್ಕೆ ಮೋದಿಯವರ ಭೇಟಿಯು ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ದೃಢ ಸಂಕಲ್ಪ ಮಾಡಿದೆಯೆಂಬುದನ್ನು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ ಅಮೆರಿಕ ತಲುಪಿರುವ ಮೋದಿಯವರು ನ್ಯೂಯಾರ್ಕ್ ಸಿಟಿ ಮೇಯರ್ ಬಿಲ್ ಡಿ ಬ್ಲೇಸಿಯೊರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಹಾನಗರಗಳಲ್ಲಿ ಕಾನೂನು ಸುವ್ಯವಸ್ಥೆ, ಭಯೋತ್ಪಾದನಾ ಬೆದರಿಕೆಯಂತಹ ಸಮಸ್ಯೆಗಳ ನಿರ್ವಹಣೆ ಕುರಿತು ಚರ್ಚಿಸಿದರು.

ಬಳಿಕ ಮೋದಿಯವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಕ್ಯಾನ್ಸರ್ ತಜ್ಞ ಪ್ರೊಫೆಸರ್ ಹೆರಾಲ್ಡ್ ವಾರ್ಮನ್‌ರನ್ನು ಭೇಟಿಯಾದರು.

Write A Comment