
ನ್ಯೂಯಾರ್ಕ್, ಸೆ.26: ಲಡಾಖ್ ಗಡಿ ಪ್ರದೇಶದಲ್ಲಿನ ಸಂಘರ್ಷವನ್ನು ಬಗೆಹರಿಸಿಕೊಂಡಿರುವ ಭಾರತ ಹಾಗೂ ಚೀನಾ ಶುಕ್ರವಾರದಿಂದಲೇ ಅಲ್ಲಿಂದ ಸೇನಾಪಡೆಗಳ ಹಿಂದೆಗೆತವನ್ನು ಪ್ರಾರಂಭಿಸಿದ್ದು, ಸೆಪ್ಟಂಬರ್ 30ರ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಸೇನಾ ಹಿಂದೆಗೆತದ ಈ ನಿರ್ಧಾರವು ಒಂದು ಮಹತ್ವದ ಸಾಧನೆಯಾಗಿದೆ ಎಂದು ಸುಷ್ಮಾ ಸ್ವರಾಜ್ ಬಣ್ಣಿಸಿದ್ದಾರೆ.
‘‘ಎರಡೂ ರಾಷ್ಟ್ರಗಳು ಜೊತೆಗೆ ಕುಳಿತು ಚರ್ಚಿಸಿವೆ ಮತ್ತು ಗಡಿವಿವಾದವನ್ನು ಬಗೆಹರಿಸಿಕೊಂಡಿವೆ ಎಂದು ನಿಮಗೆ ತಿಳಿಸಲು ನಾನು ಸಂತೋಷಪಡುತ್ತೇನೆ. ಈ ನಿಟ್ಟಿನಲ್ಲಿ ಅಂತಿಮ ಗಡುವನ್ನು ನಿರ್ಧರಿಸಲಾಗಿದೆ’’ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ನಡೆದ ಐಬಿಎಸ್‌ಎ ವಿದೇಶಾಂಗ ಸಚಿವರ ಸಭೆಯ ಬಳಿಕ ಭಾರತೀಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಗುರುವಾರ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯೀಯವರನ್ನು ಗುರುವಾರ ಭೇಟಿಯಾಗಿದ್ದು, ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಈ ತಿಂಗಳ ಮೊದಲ ಭಾಗದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೊಸದಿಲ್ಲಿಗೆ ಭೇಟಿ ನೀಡಿದ ವೇಳೆ ಗಡಿ ವಿವಾದದ ಛಾಯೆ ಮೇಲ್ನೋಟಕ್ಕೆ ಕಂಡು ಬಂದಿತ್ತಾದರೂ, ಅವರ ಭೇಟಿಯು ‘ಚಾರಿತ್ರಿಕ’ವಾಗಿದ್ದು, ಅದರಿಂದ ಉತ್ತಮ ಫಲಿತಾಂಶಗಳೇ ಉಂಟಾಗಿವೆ ಎಂದು ಸುಷ್ಮಾ ಸ್ವರಾಜ್ ವಿವರಿಸಿದ್ದಾರೆ. ಚೀನಾದ ಅಧ್ಯಕ್ಷರ ಮೊದಲ ಭೇಟಿಯ ಸಂದರ್ಭದಲ್ಲೇ ಲಡಾಖ್‌ನ ಚುಮಾರ್ ಪ್ರದೇಶದಲ್ಲಿ ಉಭಯ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಕಳೆದ ರವಿವಾರ ತಮ್ಮ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕೆಲವು ಚೀನಿ ಕಾರ್ಮಿಕರು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದಾಗ ಪ್ರದೇಶದಲ್ಲಿ ಉದ್ವಿಗ್ನತೆ ಏರ್ಪಟ್ಟಿತ್ತು. ಮಾತ್ರವಲ್ಲದೆ, ಭಾರತದ ಗಡಿಯ 5 ಕಿ.ಮೀ. ಒಳಗಿರುವ ತಿಬ್ಲೆಯವರೆಗೂ ರಸ್ತೆ ನಿರ್ಮಿಸಲು ತಮಗೆ ಆದೇಶವಿರುವುದಾಗಿ ಕಾರ್ಮಿಕರು ಹೇಳಿಕೊಂಡಿದ್ದರೆಂದು ವರದಿಯಾಗಿತ್ತು.
ಸೇನಾಪಡೆಗಳ ಹಿಂದೆಗೆತವು ಶುಕ್ರವಾರ ಪ್ರಾರಂಭಗೊಂಡಿದ್ದು, ಸೆಪ್ಟಂಬರ್ 30ರ ವೇಳೆಗೆ ಪೂರ್ಣಗೊಳ್ಳಲಿದೆ. ಉಭಯ ರಾಷ್ಟ್ರಗಳ ಸೇನಾಪಡೆಗಳು 2014ರ ಸೆಪ್ಟಂಬರ್ 1ರಂದು ಕಾರ್ಯ ನಿರ್ವಹಿಸುತ್ತಿದ್ದ ಸ್ವಸ್ಥಾನಗಳಿಗೆ ಹಿಂದಿರುಗಲಿವೆ ಎಂದು ಸುಷ್ಮಾಸ್ವರಾಜ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಮತ್ತು 2015ರೊಳಗೆ ತನ್ನ ಖಾಯಂ ಸದಸ್ಯತ್ವವನ್ನು ವಿಸ್ತರಿಸುವುದು ಸೇರಿದಂತೆ ಸುಧಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಚಾರವಾಗಿ ಚೀನಾದ ನಾಯಕರೊಂದಿಗೆ ಚರ್ಚಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ಸೋದ್ಯೋಗಿಯೊಂದಿಗಿನ ತನ್ನ ಭೇಟಿಯು ಅತ್ಯಂತ ಯಶಸ್ವಿಯಾಗಿದೆ ಎಂದವರು ಬಣ್ಣಿಸಿದ್ದಾರೆ.