ಅಂತರಾಷ್ಟ್ರೀಯ

ಭಾರತದಲ್ಲಿ ಬದಲಾವಣೆಯ ಭರವಸೆ: ಮೋದಿ

Pinterest LinkedIn Tumblr

narendra modimodi

ನ್ಯೂಯಾರ್ಕ್, ಸೆ.26: ಭಾರತದಲ್ಲಿ ಬದಲಾವಣೆಯ ನಿರೀಕ್ಷೆಯ ಉಬ್ಬರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಐದು ದಿನಗಳ ಅಮೆರಿಕ ಪ್ರವಾಸದ ಭಾಗವಾಗಿ ಶನಿವಾರ ನ್ಯೂಯಾರ್ಕ್ ತಲುಪಿರುವ ಪ್ರಧಾನಿ ಮೋದಿ ಒಂದು ನೂತನ ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬೇಕಾದ ವಹಿವಾಟು ಹಾಗೂ ಯೋಜನೆಗಳಿಗೆ ಭಾರತವು ಮುಕ್ತ ಹಾಗೂ ಸ್ನೇಹಶೀಲವಾಗಿರುವುದಾಗಿ ಅವರು ಹೇಳಿದ್ದಾರೆ.

‘‘ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಾಗೂ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಭಾರತಕ್ಕೆ ಅತ್ಯಾವಶ್ಯಕವಾಗಿರುವ ವಿಶ್ವದರ್ಜೆಯ ಮೂಲಸೌಲಭ್ಯವನ್ನು ನಾವು ನಿರ್ಮಿಸಲಿದ್ದೇವೆ. ನಾವು ನಮ್ಮ ನಗರಗಳು ಹಾಗೂ ಪಟ್ಟಣಗಳನ್ನು ವಾಸಯೋಗ್ಯ, ಸುಸ್ಥಿರ ಹಾಗೂ ಅತ್ಯಾಧುನಿಕಗೊಳಿಸಲಿದ್ದೇವೆ ಮತ್ತು ನಮ್ಮ ಹಳ್ಳಿಗಳನ್ನು ಆರ್ಥಿಕ ರೂಪಾಂತರದ ಹೊಸ ಯಂತ್ರಗಳನ್ನಾಗಿ ಮಾಡಲಿದ್ದೇವೆ’’ ಎಂದು ಮೋದಿ ಹೇಳಿದ್ದಾರೆ.

‘ಮೇಕ್ ಇನ್ ಇಂಡಿಯಾ’ ನಮ್ಮ ಬದ್ಧತೆಯಾಗಿದೆ ಮತ್ತು ಭಾರತವನ್ನು ಒಂದು ಹೊಸ ಜಾಗತಿಕ ಉತ್ಪಾದನಾ ವಲಯವನ್ನಾಗಿ ರೂಪಿಸುವಲ್ಲಿ ಎಲ್ಲರಿಗೂ ಆಹ್ವಾನವಿದೆ. ವಾಸ್ತವದಲ್ಲಿ ಮಾಡಲು ಸಾಧ್ಯವಾಗುವುದೆಲ್ಲವನ್ನು ನಾವು ಮಾಡಲಿದ್ದೇವೆ’’ ಎಂದು ‘ದ ವಾಲ್ ಸ್ಟ್ರೀಟ್ ಜರ್ನಲ್’ಗೆ ಬರೆದಿರುವ ಲೇಖನವೊಂದರಲ್ಲಿ ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಿತ್ರರೊಂದಿಗಿನ ಭಾಗಿದಾರಿಕೆಯೊಂದಿಗೆ ತನ್ನ ಕನಸುಗಳನ್ನು ಭಾರತ ಹಿಂಬಾಲಿಸಲಿದೆ ಎಂದವರು ಹೇಳಿದ್ದಾರೆ.

‘‘ಜಗತ್ತಿಗೆ ಮುಕ್ತವಾಗಿರುವುದು ಭಾರತದ ಸಹಜ ಪ್ರವೃತ್ತಿ ಎಂಬುದನ್ನು ಇತಿಹಾಸ ನಮಗೆ ಹೇಳುತ್ತದೆ. ವ್ಯಾಪಾರ, ಯೋಜನೆಗಳು, ಸಂಶೋಧನೆ, ಆಧುನಿಕೀಕರಣ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಭಾರತವು ಮುಕ್ತ ಹಾಗೂ ಸ್ನೇಹಿಯಾಗಿರಲಿದೆ’’ ಎಂದು ಮೋದಿ ವಿವರಿಸಿದ್ದಾರೆ. ‘‘ಮುಂಬರುವ ತಿಂಗಳುಗಳಲ್ಲಿ ನೀವು ಭಾರತಕ್ಕೆ ಪ್ರಯಾಣ ಬೆಳೆಸಲು ಪ್ರಾರಂಭಿಸುವ ಮೊದಲೇ ಈ ವ್ಯತ್ಯಾಸವನ್ನು ಅನುಭವಿಸಲಿದ್ದೀರಿ’’ ಎಂದವರು ಹೇಳಿದ್ದಾರೆ.

ಈ ಸಲ ಮೇಯಲ್ಲಿ ಸುಮಾರು 1.25 ಶತಕೋಟಿ ಜನರು ರಾಜಕೀಯ ಸ್ಥಿರತೆ, ಉತ್ತಮ ಆಡಳಿತ ಹಾಗೂ ತ್ವರಿತ ಅಭಿವೃದ್ಧಿಯ ಬಗ್ಗೆ ನಿಸ್ಸಂದೇಹವಾಗಿ ಮಾತನಾಡುತ್ತಿದ್ದರು ಮತ್ತು ಕಳೆದ 30 ವರ್ಷಗಳ ಇತಿಹಾಸದಲ್ಲಿಯೇ ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಹುಮತದ ಪಕ್ಷವೊಂದು ಸರಕಾರ ರಚಿಸಿದೆ ಎಂದವರು ವಿವರಿಸಿದ್ದಾರೆ.

35ರ ವಯೋಮಾನದ ಕೆಳಗಿನ ಸುಮಾರು 800 ದಶಲಕ್ಷ ಜನರನ್ನು ಹೊಂದಿರುವ ರಾಷ್ಟ್ರವೊಂದು ಭರವಸೆ ಹಾಗೂ ವಿಶ್ವಾಸದಿಂದ ತುಂಬಿ ತುಳುಕುತ್ತಿದೆ. ಯುವಜನರ ಶಕ್ತಿ, ಹುಮ್ಮಸ್ಸು ಹಾಗೂ ಉದ್ಯಮಶೀಲತೆಯು ಭಾರತದ ಅತಿದೊಡ್ಡ ಶಕ್ತಿಯಾಗಿದೆ ಎಂದವರು ಬಣ್ಣಿಸಿದ್ದಾರೆ.

‘‘ಅಂತಹ ಲಕ್ಷಣಗಳನ್ನು ಹೊರಗೆಡಹುವುದೇ ನನ್ನ ಸರಕಾರದ ಅತಿದೊಡ್ಡ ಗುರಿಯಾಗಿದೆ’’ ಎಂದವರು ಹೇಳಿದ್ದಾರೆ.
‘‘ಅನಗತ್ಯ ಕಾನೂನುಗಳು ಹಾಗೂ ನಿಯಮಗಳನ್ನು ತೊಡೆದುಹಾಕುವುದು, ಆಧಿಕಾರಶಾಹಿಯನ್ನು ಸರಳ ಹಾಗೂ ಸುಲಭಗೊಳಿಸುವುದು ಮತ್ತು ಸರಕಾರವು ಹೆಚ್ಚು ಪಾರದರ್ಶಕ, ಸ್ಪಂದನಾತ್ಮಕ ಹಾಗೂ ಉತ್ತರದಾಯಿಯನ್ನಾಗಿಸುವ ಮೂಲಕ ನಾವು ಗುರಿ ಸಾಧಿಸಲಿದ್ದೇವೆ’’ ಎಂದವರು ವಿವರಿಸಿದ್ದಾರೆ.

Write A Comment