ರಾಷ್ಟ್ರೀಯ

ಕೆಂಪುಕೋಟೆ ಪ್ರಕರಣ; ದೀಪ್ ಸಿಧು ಸೇರಿದಂತೆ ಹಲವರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು: ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ

Pinterest LinkedIn Tumblr

ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಗೆ ನುಗ್ಗಿ ಸಿಖ್ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ದೀಪ್ ಸಿಧು ಸೇರಿದಂತೆ ಹಲವರ ಬಂಧನಕ್ಕೆ ಬಲೆ ಬೀಸಿರುವ ದೆಹಲಿ ಪೊಲೀಸರು 1 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳ ದೀಪ್ ಸಿಧು, ಜುಗರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರು ನಾಪತ್ತೆಯಾಗಿದ್ದು, ಇವರ ಬಂಧನಕ್ಕೆ ಬಲೆ ಬೀಸಿರುವ ದೆಹಲಿ ಪೊಲೀಸರು, ಇವರ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಎಲ್ಲ ಆರೋಪಿಗಳು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದ ಆರೋಪ ಎದುರಿಸುತ್ತಿದ್ದಾರೆ.

ಇನ್ನು ಅದೇ ದಿನ ದೆಹಲಿಯಲ್ಲಿ ಹಿಂಸಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾಗಿರುವ ಜಜ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಬಂಧನಕ್ಕೂ ಪೊಲೀಸರು ಕ್ರಮ ಕೈಗೊಂಡಿದ್ದು, ಇವರ ಕುರಿತು ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಜನವರಿ 26ರಂದು ದೆಹಲಿಯಲ್ಲಿ ಪೊಲೀಸರೊಂದಿಗಿನ ಒಪ್ಪಂದವನ್ನು ಮುರಿದಿದ್ದ ಪ್ರತಿಭಟನಾಕಾರರು, ನಿಗದಿತ ಮಾರ್ಗವನ್ನು ಬಿಟ್ಟು ದೆಹಲಿಯೊಳಗೆ ಪ್ರವೇಶ ಮಾಡಿದ್ದರು. ದೆಹಲಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದೆಹಲಿಗೆ ನುಗ್ಗಿದ್ದರು. ಅಲ್ಲದೆ ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳನ್ನು ಥಳಿಸಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದರು. ಈ ವೇಳೆ ನೂರಾರು ಪೊಲೀಸರು ಗಾಯಗೊಂಡಿದ್ದರು, ಮತ್ತು ಪೊಲೀಸರು ತಮ್ಮ ಪ್ರಾಣ ರಕ್ಷಣೆಗೆ ಕೆಂಪುಕೋಟೆಯ ಗೋಡೆ ಮೇಲಿಂದ ಕೆಳಗೆ ಧುಮುಕಿದ್ದರು.

Comments are closed.