ಕರ್ನಾಟಕ

ಶೃಂಗೇರಿ ಅಪ್ರಾಪ್ತೆಯ ಅತ್ಯಾಚಾರ: ತಪ್ಪಿತಸ್ಥರ‌ ಬಂಧನಕ್ಕೆ ಪೊಲೀಸರಿಗೆ ಸೂಚನೆ- ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಚಿಕ್ಕಮಗಳೂರು: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಬಲಾತ್ಕಾರ, ಅತ್ಯಾಚಾರ ಅತ್ಯಂತ ಖಂಡನೀಯವಾದುದು. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ತಪ್ಪಿತಸ್ತರನ್ನು ಬಂಧಿಸಲು, ಮತ್ತು ಬಾಲಕಿಗೆ ಸೂಕ್ತ ರಕ್ಷಣೆ ಕೊಡವಂತೆ ಸೂಚಿಸಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಶೃಂಗೇರಿ ಘಟನೆಯ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ತಕ್ಷಣದಲ್ಲಿಯೇ ತಪ್ಪಿತಸ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಕರೆತಂದು ದುರುಪಯೋಗ ಮಾಡಿದ ಅವಳ ಚಿಕ್ಕಮ್ಮ ಎಂದು ಕರೆಯಲ್ಪಡುವ ಗೀತಳನ್ನು ಕೂಡ ಬಂಧಿಸಿ ವಿಚಾರಿಸಲಾಗುತ್ತಿದೆ. SSLC ಓದುವ ಹುಡುಗಿ ತನ್ನ ಊರಿನಿಂದ ಇಲ್ಲಿಗೆ ಯಾಕೆ ಬಂದಳು? ಯಾಕೆ ಅವಳನ್ನು ಚಿಕ್ಕಮ್ಮ ದುರುಪಯೋಗ ಮಾಡಿದಳು? ಇದೇ ರೀತಿ ಇನ್ಯಾವ ಹುಡುಗಿಯ ಜೊತೆ ಗೀತಾ ಸಂಪರ್ಕ ಬೆಳೆಸಿದ್ದಾಳೆ ಎಂಬುದರ ಕುರಿತು ಕೂಡ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ.

ಪ್ರಕರಣ ಗಂಭೀರವಾಗಿದ್ದು, ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾಗಿರುವುದರಿಂದ, ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಪ್ರತಿನಿತ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಈ ಕೇಸನ್ನು ನಿಗಾವಹಿಸಿ ಗಮನಿಸಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.