ರಾಷ್ಟ್ರೀಯ

ದೆಹಲಿಯ ಕೆಂಪುಕೋಟೆಗೆ ರೈತರ ಮುತ್ತಿಗೆ; ಘರ್ಷಣೆ ವೇಳೆ ಓರ್ವ ರೈತ ಬಲಿ

Pinterest LinkedIn Tumblr

ನವದೆಹಲಿ: ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಯು ತೀವ್ರಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾ ನಿರತ ರೈತರು ದೆಹಲಿ ಕೆಂಪುಕೋಟೆ ಆವರಣವನ್ನು ಪ್ರವೇಶಿಸಿದ್ದಾರೆ. ಕೆಂಪು ಕೋಟೆಯ ಧ್ವಜಸ್ತಂಭದಲ್ಲಿ ರೈತಧ್ವಜವನ್ನು ಹಾರಿಸಿದ್ದಾರೆ.

ರೈತರು – ಪೊಲೀಸರು ನಡುವೆ ಘರ್ಷಣೆ ನಡೆದು ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್‌ ಪ್ರತಿಭಟನೆ ಈಗ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿಯ ಕೆಲ ಭಾಗದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇಂದು ಮಧ್ಯಾಹ್ನ ದೆಹಲಿ ತಲುಪಿದ ರೈತರು ವಿಶ್ವ ಪಾರಂಪರಿಕ ತಾಣವಾದ ಕೆಂಪುಕೋಟೆಗೆ ನುಗ್ಗಿ ಕಿಸಾನ್‌ ಧ್ವಜವನ್ನು ಹಾರಿಸಿದ್ದಾರೆ. ಇಷ್ಟೇ ಅಲ್ಲದೇ ಕೆಂಪುಕೋಟೆಯ ಗುಮ್ಮಟದ ಮೇಲೆ ರೈತರು ಸಿಖ್‌ ಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕೆಂಪುಕೋಟೆಗೆ ನುಗ್ಗಿದ ಪರಿಣಾಮ ಪೊಲೀಸರಿಗೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್‌ ಮಾಡಿ ಚದುರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ದೆಹಲಿ ಕೆಲ ಭಾಗ ಮತ್ತು ಸಿಂಘು, ಗಾಜಿಯಾಬಾದ್‌, ಟಿಕ್ರಿ ಗಡಿ ಭಾಗದಲ್ಲಿ ಇಂದು ಮಧ್ಯರಾತ್ರಿಯವರೆಗೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Comments are closed.