ಕರಾವಳಿ

ಕುಂದಾಪುರದಲ್ಲಿ ಸಂಭ್ರಮದೊಂದಿಗೆ ಜರುಗಿತು 72 ಗಣರಾಜ್ಯೋತ್ಸವ ಆಚರಣೆ

Pinterest LinkedIn Tumblr

ಕುಂದಾಪುರ: ದೇಶದ ನಾಗರಿಕರ ಹಿತರಕ್ಷಣೆಯನ್ನ ಆದ್ಯತೆಯಾಗಿ ಇರಿಸಿಕೊಂಡು ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಹಿರಿಯರು ವಿಶ್ವಕ್ಕೆ ಮಾದರಿಯಾಗಿ ರೂಪಿಸಿರುವ ನಮ್ಮ ಹೆಮ್ಮೆಯ ಸಂವಿಧಾನವನ್ನು ಅನುಸರಿಸುವುದು ನಮ್ಮ ಹೊಣೆಯಾಗಿದೆ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತ್ರತ್ವದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅವರು ಧ್ವಜಾರೋಹಣ ನಡೆಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ನಾವು ಭಾರತೀಯರು ಎನ್ನುವ ಘನತೆಯೊಂದಿಗೆ ಜಾತ್ಯಾತೀತ, ಪ್ರಜಾಸತ್ತಾತ್ಮಕ, ಭಾತೃತ್ವದ ತಳಹದಿಯೊಂದಿಗೆ ರೂಪಿತವಾಗಿರುವ ಸಂವಿಧಾನದ ಅಳವಡಿಕೆ ಸ್ಮರಣೀಯ. ಕೋವಿಡ್ ಮಹಾವಿಪತ್ತಿನ ಸಂದರ್ಭದಲ್ಲಿ ಜಿಲ್ಲೆಯ ಜನತೆ ತೋರಿದ ಸ್ಪಂದನೆ ದೇಶಕ್ಕೆ ಮಾದರಿಯಾಗಿದೆ. ಕುಸಿದಿರುವ ಉದ್ಯಮ ಹಾಗೂ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕಾದ ಅನೀವಾರ್ಯತೆ ಇದೆ. ಕರಾವಳಿಯ ನೈಸರ್ಗಿಕ ಸೊಬಗನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಾಗಿದೆ. ಸರ್ಕಾರದ ಕಾರ್ಯಕ್ರಮಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಬೇಕು ಎಂದು ಅವರು ಹೇಳಿದರು.

ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಪುರಸಭೆ
ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಡಿವೈಎಸ್ಪಿ ಕೆ. ಶ್ರೀಕಾಂತ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಸಹಾಯ ಕೃಷಿ ನಿರ್ದೇಶಕಿ ರೂಪಾ ಜಿ, ವಲಯ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯುವ ಜನ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷರಾದ ಪಿ. ಗುಣರತ್ನ, ದೇವಕಿ ಪಿ ಸಣ್ಣಯ್ಯ

ಕುಂದಾಪುರ ಠಾಣಿಯ ಎಸ್. ಐ ಸದಾಶಿವ ಗವರೋಜಿ ಅವರ ನೇತೃತ್ವದಲ್ಲಿ ಪೊಲೀಸ್, ಗ್ರಹ ರಕ್ಷಕ ದಳ, ಎನ್ ಸಿಸಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ವಾದ್ಯ ನುಡಿಸಲಾಯಿತು. ಎಚ್. ಎಂ. ಎಂ ಆಂಗ್ಲ ಮಾಧ್ಯಮ ಶಾಲೆಯ ಸಂಗೀತ ಶಿಕ್ಷಕ ಪ್ರಕಾಶ್‌ ವಡೇರಹೋಬಳಿ ಅವರಿಂದ ದೇಶ ಭಕ್ತಿ ಗೀತೆ ಗಾಯನ ನಡೆಯಿತು.

ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಾಲ್ಲೂಕು ಮಟ್ಟದ ಭತ್ತದ ಸ್ಪರ್ಧೆಯಲ್ಲಿ ವಿಜೇತ ಹಾಗೂ ಆತ್ಮ ಯೋಜನೆಯಡಿ ಪ್ರಶಸ್ತಿ ಪುರಸ್ಕೃತ ರೈತರಾದ ಮಹಾಲಿಂಗ ದೇವಾಡಿಗ ಬಸ್ರೂರು , ಸಿಂಗಾರಿ ಶೆಡ್ತಿ ಹರ್ಕೂರು , ಶೀನಪ್ಪ ಶೆಟ್ಟಿ ಹರ್ಕೂರು, ಬಾಲಕೃಷ್ಣನ್ ಮುದೂರು, ರಾಮಯ್ಯ ಶೆಟ್ಟಿ ಕಾಲ್ತೋಡು, ಸುಜಾತ ಶೆಟ್ಟಿ ಹಳ್ಳಾಡಿ – ಹರ್ಕಾಡಿ, ಚಂದ್ರ ಖಾರ್ವಿ ಪಡುವರಿ ಹಾಗೂ ಶಂಕರ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ಆನಂದಪ್ಪ ಹೆಚ್ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ ವಂದಿಸಿದರು.

Comments are closed.