ರಾಷ್ಟ್ರೀಯ

ಮದುವೆಯಾಗಿ 3 ವರ್ಷವಾದರೂ ಪತ್ನಿ ಮಗು ಹೆರಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಲಖನೌ: ಮದುವೆಯಾಗಿ 3 ವರ್ಷವಾದರೂ ಪತ್ನಿ ಮಗುವನ್ನು ಹೆರಲಿಲ್ಲ ಎನ್ನುವ ಕಾರಣಕ್ಕೆ ಪತಿಯೇ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರೀತಿ ಹೆಸರಿನ ಯುವತಿಯನ್ನು ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಿಜ್ನೋರ್​ನ ಮುಕಾರ್ಪುರಿ ಗ್ರಾಮದ ನಿವಾಸಿ ರೋಹಿತ್​ ಕುಮಾರ್​ಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಪ್ರೀತಿಯ ತಂದೆ ತಾಯಿ, ವರನ ಕುಟುಂಬಕ್ಕೆ ತಮ್ಮ ಕೈಲಾದಷ್ಟು ವರದಕ್ಷಿಣೆ ನೀಡಿದ್ದರು. ಆದರೆ ಅದು ಸಾಕಾಗಿಲ್ಲ ಎಂದು ವರನ ಕುಟುಂಬ ಮದುವೆಯಾದ ಮೇಲೆ ಪ್ರೀತಿಗೆ ಹಿಂಸೆ ನೀಡಲು ಆರಂಭಿಸಿದೆ. ಆಗಾಗ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿಯೂ ಹೇಳಲಾಗಿದೆ.

ಮದುವೆಯಾಗಿ ಮೂರು ವರ್ಷಗಳಾದರೂ ಪ್ರೀತಿಗೆ ಗರ್ಭ ನಿಂತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೋಹಿತ್​ ಆಕೆಯ ಕೊಲೆ ಮಾಡಿದ್ದಾನೆ. ಇದಕ್ಕೆ ಆತನ ತಂದೆ ತಾಯಿಯೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪ್ರೀತಿಯ ತಂದೆ ತಾಯಿ, ಅಳಿಯನ ಮನೆಗೆ ಹೋದಾಗ, ಮಗಳ ದೇಹ ಕೋಣೆಯ ಬೆಡ್​ನ ಮೇಲಿತ್ತು. ಆಕೆಯ ಕುತ್ತಿಗೆಯಲ್ಲಿ ಹಗ್ಗವಿದ್ದು, ಇದನ್ನು ಆತ್ಮಹತ್ಯೆ ಎಂದು ನಂಬಿಸುವ ಸಲುವಾಗಿ ಹಗ್ಗದ ಇನ್ನೊಂದು ತುದಿಯನ್ನು ಫ್ಯಾನ್​ಗೆ ಕಟ್ಟಲಾಗಿತ್ತು ಎನ್ನಲಾಗಿದೆ. ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಕುಟುಂಬ ದೂರು ನೀಡಿದ್ದು, ಇದೀಗ ಆಕೆಯ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments are closed.