ರಾಷ್ಟ್ರೀಯ

ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಅಧಿಕಾರಿಗಳಿಂದ ಶೀಘ್ರವೇ ಸರಕಾರಕ್ಕೆ ವರದಿ ಸಲ್ಲಿಕೆ

Pinterest LinkedIn Tumblr

ಹತ್ರಾಸ್: ದೇಶಾದ್ಯಂತ ಕೋಲಾಹಲವೇ ಎಬ್ಬಿಸಿದ್ದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಐಟಿ ಅಧಿಕಾರಿಗಳು ಉತ್ತರಪ್ರದೇಶ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಎಸ್ಐಟಿ ಅಧಿಕಾರಿಗಳು ಇಂದು ಸಂಜೆ ವರದಿ ಸಲ್ಲಿಸಲಿದ್ದಾರೆಂದು ವರದಿಗಳು ತಿಳಿಸಿವೆ.

ಹತ್ರಾಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸೆಪ್ಟೆಂಬರ್ 30ರಂದು ಎಸ್ಐಟಿ ತನಿಖೆಗೆ ವಹಿಸಿದ್ದರು. 7 ದಿನಗಳಲ್ಲಿ ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಇದರಂತೆ ಅಕ್ಟೋಬರ್ 7 ರಂದು ವರದಿ ಸಲ್ಲಿಸಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತೆ 10 ದಿನಗಳ ಕಾಲಾವಕಾಶ ನೀಡಿತ್ತು.

ಪ್ರಕರಣ ಸಂಬಂಧ ಈ ಹಿಂದೆ ಹತ್ರಾಸ್ ಎಸ್’ಪಿ, ಡಿಎಸ್’ಪಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಲ್ಲದೆ, ಪ್ರಕರಣವನ್ನು ಸಿಬಿಐ ಕೂಡ ತನಿಖೆ ನಡೆಸುತ್ತಿದೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

Comments are closed.