ಕರಾವಳಿ

ಯಕ್ಷಗಾನ ಗುರು ಗಣೇಶ ಕೊಲೆಕಾಡಿಯವರಿಗೆ `ರಂಗ ಭಾಸ್ಕರ ಪ್ರಶಸ್ತಿ’ : ಅ.17ರಂದು ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : ಯಕ್ಷಗಾನ ಗುರು, ಪ್ರಸಂಗಕರ್ತ, ಛಾಂದಸ ಕವಿಯಾಗಿ ಪ್ರಸಿದ್ಧಿ ಪಡೆದಿರುವ ಗಣೇಶ ಕೊಲೆಕಾಡಿಯವರು ಮತ್ತೊಂದು ಪ್ರಶಸ್ತಿಯ ಹಿರಿಮೆಗೆ ಪಾತ್ರರಾಗುತ್ತಿದ್ದಾರೆ. ಈ ಬಾರಿಯ ರಂಗ ಪ್ರಶಸ್ತಿಯ ಗೌರವ ಕೊಲೆಕಾಡಿಯವರಿಗೆ ಸಲ್ಲುತ್ತಿದೆ.

`ರಂಗ ಭಾಸ್ಕರ’ ಪ್ರಶಸ್ತಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ದಿ.ಭಾಸ್ಕರ ನೆಲ್ಲಿತೀರ್ಥ ಅವರ ಸ್ಮರಣಾರ್ಥ `ರಂಗ ಭಾಸ್ಕರ ಪ್ರಶಸ್ತಿ’ಯನ್ನು ನೀಡುತ್ತ ಬಂದಿದೆ.

2020 ನೇ ಸಾಲಿನ ಪ್ರಶಸ್ತಿಯನ್ನು ತನ್ನ ದೈಹಿಕ ಹಾಗೂ ಮಾನಸಿಕ ನೋವುಗಳನ್ನೆಲ್ಲಾ ಮರೆತ, ಪ್ರಸಂಗ, ಕಾವ್ಯ, ಪ್ರಬಂಧ ರಚನೆ ಹಾಗೂ ಯಕ್ಷಗಾನದ ಹಿಮ್ಮೇಳ ವಾದನ, ಭಾಗವತಿಕೆ, ಅರ್ಥಗಾರಿಕೆಯ ಅಧ್ಯಾಪನ ಮಾಡುತ್ತಾ ದಿ.ದಿವಾಣ ಭೀಮ ಭಟ್ಟರ ರಾಯಭಾರಿಯಾಗಿ ಛಂದಸ್ಸಿನ ಹಾಗೂ ಯಕ್ಷಗಾನದ ಅವಿನಾಭಾವ ಸಂಬಂಧವನ್ನು ಸುಸ್ಪಷ್ಟವಾಗಿ ಪರಿಚಯಿಸುತ್ತಾ ಛಂದಃಸ್ವತಿ ಡಾ. ಶಿಮಂತೂರು (ನಂದಿಕೂರು) ನಾರಾಯಣ ಶೆಟ್ಟರ ಹೆಮ್ಮೆಯ ಶಿಷ್ಯನಾಗಿ, ಯಕ್ಷಗಾನ ಕಲಾ ಮಾತೆಯ ಹಾಗೂ ಕನ್ನಡಾಂಬೆಯ ಸೇವೆಯಲ್ಲಿ ತನ್ನನ್ನು ಪೂರ್ತಿ ತೊಡಗಿಸಿಕೊಂಡು ಜೀವನಾನಂದ ಅನುಭವಿಸುತ್ತಿರುವ ಯಕ್ಷ-ನಾಟಕರಂಗಗಳಲ್ಲಿ ಸುವಿಖ್ಯಾತರಾದ ಗಣೇಶ ಕೊಲೆಕಾಡಿ ಇವರನ್ನು `ರಂಗ ಭಾಸ್ಕರ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ. ಕೊಲೆಕಾಡಿ ಅವರಿಗೆ ಅ. 17ರಂದು ಮುಲ್ಕಿ ಕೊಲೆಕಾಡಿಯ ಅವರ ಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಪ್ರಶಸ್ತಿಯು ಸನ್ಮಾನ ಪತ್ರ, ಪ್ರಶಸ್ತಿ ಫಲಕ ಮತ್ತು ನಗದನ್ನು ಒಳಗೊಂಡಿದೆ.ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಹಾಗೂ ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯುವ ಕೈಂಕರ್ಯ ನಿರ್ವಹಿಸಿದೆ ಎಂದು ಸಂಚಾಲಕರು ಮತ್ತು ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಗಣೇಶ ಕೊಲೆಕಾಡಿಯವರ ಕುರಿತು:

ಯಕ್ಷಗಾನ ಗುರು, ಪ್ರಸಂಗಕರ್ತ, ಛಾಂದಸ ಕವಿಯಾಗಿ ಪ್ರಸಿದ್ಧಿ ಪಡೆದಿರುವ ಗಣೇಶ ಕೊಲೆಕಾಡಿಯವರು ಸದಾಕಾಲವೂ ಕಲೆಯನ್ನೇ ಉಸಿರಾಗಿಸಿ ಯಕ್ಷಗಾನ ಸಂಶೋಧನೆ, ಅನ್ವೇಷಣೆ ಮತ್ತು ಪ್ರಸರಣವೇ ತಮ್ಮ ಧ್ಯೇಯವಾಗಿರಿಸಿಕೊಂಡ ಕಲಾ ತಪಸ್ವೀ. ತನ್ನ ದೈಹಿಕ ಹಾಗೂ ಮಾನಸಿಕ ನೋವುಗಳನ್ನೆಲ್ಲಾ ಮರೆತ, ಬಡತನವಿದ್ದರೂ ಕಳೆದ ಹತ್ತು ವರ್ಷಗಳಿಂದ ಮನೆಯಲ್ಲಿ ನೂರಾರು ಜ್ಞಾನದಾಹಿಗಳಿಗೆ ಉಚಿತವಾಗಿ ಯಕ್ಷಶಿಕ್ಷಣ ನೀಡುತ್ತಿದ್ದಾರೆ.

1971ರಲ್ಲಿ ಕೊಲೆಕಾಡಿಯಲ್ಲಿ ಜನಿಸಿದ ಅವರು ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಲಯಬ್ರಹ್ಮ ದಿ.ದಿವಾಣ ಭೀಮ ಭಟ್ಟರಲ್ಲಿ ಕಲಿತರು. ನಂತರ ಯಕ್ಷಗಾನ ಛಂದಸ್ಸನ್ನು ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಕರಗತ ಮಾಡಿಕೊಂಡು ಛಂದಸ್ಸಿನಲ್ಲಿ ಅಪೂರ್ವ ಸಾಧನೆಯನ್ನೇ ಮಾಡಿ ಗುರುಗಳ ಮೆಚ್ಚುಗೆ ಪಾತ್ರರಾಗಿ ಅವರ ಪಟ್ಟ ಶಿಷ್ಯನೆಂಬ ಕೀರ್ತಿಗೆ ಪಾತ್ರರಾದರು.

ಛಂದಸ್ಸಿನ ಗುರು, ತಾಳಮದ್ದಳೆ ಅರ್ಥಧಾರಿ, ಪ್ರಸಂಗ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ, ಪತ್ರಕರ್ತ, ಅಂಕಣಕಾರ, ಲೇಖಕ, ನಾಟಕ ರಚನೆ, ನಿರ್ದೇಶನ, ಹಿನ್ನೆಲೆ ಗಾಯಕ, ಭಕ್ತಿಗೀತೆ ರಚನೆ, ಸಂಘಟನೆ ಇವು ಗಣೇಶ ಕೊಲೆಕಾಡಿ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಇವರ ಕಲಾಪ್ರೌಢಿಮೆಯನ್ನು ಗುರುತಿಸಿ ಉಡುಪಿ `ಯಕ್ಷಗಾನ ಕಲಾರಂಗ’ದವರು ಕೊಲೆಕಾಡಿಯಲ್ಲಿ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.

ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.1ರಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಬಯಲಾಟಕ್ಕೆ ಗಣೇಶ ಕೊಲೆಕಾಡಿ ಅವರು ಪ್ರಸಂಗ ರಚಿಸಿ ಕೊಡುತ್ತಿದ್ದರು.43ಕ್ಕೂ ಹೆಚ್ಚು ಪ್ರಸಂಗ ರಚಿಸಿರುವ ಕೊಲೆಕಾಡಿ ಅವರ ಆಯ್ದ ಪ್ರಸಂಗಗಳ ಸಂಪುಟವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟಿಸಿದೆ.

ಸತತವಾಗಿ ಸಾರಸ್ವತ ತಪಸ್ಸನ್ನಾಚರಿಸುತ್ತ ಸ್ಪೂರ್ತಿಯ ಸೆಲೆಯಾಗಿರುವ ಗಣೇಶ ಕೊಲೆಕಾಡಿಯವರಿಗೆ ಮುದ್ದಣ ಪುರಸ್ಕಾರ , ಶೇಣಿ ಪ್ರಶಸ್ತಿಯೇ ಮೊದಲಾದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

Comments are closed.