ರಾಷ್ಟ್ರೀಯ

ಭಾರತದಲ್ಲಿ ಸುಮಾರು 11 ಲಕ್ಷಕ್ಕೆ ತಲುಪಿದ ಕೋವಿಡ್-19 ರೋಗಿಗಳ ಸಂಖ್ಯೆ; ಒಂದೇ ದಿನ 40,425 ಮಂದಿಗೆ ಕೊರೋನಾ ಸೋಂಕು-681 ಸಾವು

Pinterest LinkedIn Tumblr

ನವದೆಹಲಿ: ಭಾರತದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಸುಮಾರು 11 ಲಕ್ಷಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರಿದ್ದು ನಿನ್ನೆ ಒಂದೇ ದಿನ 9 ಸಾವಿರದ 518 ಮಂದಿಗೆ ಸೋಂಕು ತಗುಲಿದೆ. ಇಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಲಕ್ಷದ 10 ಸಾವಿರದ 455ಕ್ಕೇರಿದ್ದು 258ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಮುಂಬೈ ಮಹಾನಗರವೊಂದರಲ್ಲಿಯೇ 149 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ತಮಿಳು ನಾಡಿನಲ್ಲಿ ನಿನ್ನೆ ಒಂದೇ ದಿನ 4 ಸಾವಿರದ 979 ಮಂದಿಯಲ್ಲಿ ಸೋಂಕು ತಗುಲಿದೆ. ಇದುವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1.70 ಲಕ್ಷ ದಾಟಿದ್ದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ನಿನ್ನೆಯವರೆಗೆ ದೇಶದಲ್ಲಿ 1 ಕೋಟಿಯ 40 ಲಕ್ಷದ 47 ಸಾವಿರದ 908 ಮಂದಿಗೆ ಸೋಂಕಿನ ಪರೀಕ್ಷೆ ಮಾಡಿಸಲಾಗಿದೆ. ಅವರಲ್ಲಿ ನಿನ್ನೆ ಒಂದೇ ದಿನ 2 ಲಕ್ಷದ 56 ಸಾವಿರದ 039 ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ನಿನ್ನೆ ಒಂದೇ ದಿನ 5 ಸಾವಿರದ 041 ಕೋವಿಡ್ -19 ಪ್ರಕರಣಗಳು ಆಂಧ್ರಪ್ರದೇಶದಲ್ಲಿ ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ನಿನ್ನೆ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ತಲುಪಿದೆ. ಅಲ್ಲದೆ, ಒಂದು ದಿನದಲ್ಲಿ 56 ಕೊರೋನಾ ವೈರಸ್ ರೋಗಿಗಳು ಮೃತಪಟ್ಟಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ, ಇದುವರೆಗೆ ರಾಜ್ಯದಲ್ಲಿ 642 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ ವರದಿ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲಿ 4 ಸಾವಿರದ 120 ಹೊಸ ಪ್ರಕರಣಗಳು ವರದಿಯಾಗಿದ್ದು 91 ಮಂದಿ ಮೃತಪಟ್ಟು ಒಟ್ಟು ಸಾವಿನ ಸಂಖ್ಯೆ 1 ಸಾವಿರದ 331ಕ್ಕೇರಿದ್ದು ಇದುವರೆಗೆ 63 ಸಾವಿರದ 772 ಮಂದಿ ಸೋಂಕಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಟ್ಟಾರೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 11 ಲಕ್ಷ ದಾಟಿದ್ದು ನಿನ್ನೆ ಒಂದೇ ದಿನ 40 ಸಾವಿರದ 425 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 681 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ ದೇಶದಲ್ಲಿ 11 ಲಕ್ಷದ 18 ಸಾವಿರದ 043 ಆಗಿದ್ದು 3 ಲಕ್ಷದ 90 ಸಾವಿರದ 459 ಸಕ್ರಿಯ ಪ್ರಕರಣಗಳು, 7 ಲಕ್ಷದ 87 ಗುಣಮುಖ ಹೊಂದಿದ/ಬಿಡುಗಡೆಯಾದ/ವಲಸೆ ಹೋದ ಪ್ರಕರಣಗಳಿದ್ದು 27 ಸಾವಿರದ 497 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಆದರೆ ಇದೇ ಮೊದಲ ಬಾರಿಗೆ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಶೇಕಡಾ 2.5ಕ್ಕಿಂತ ಕಡಿಮೆಯಾಗಿದೆ ಎಂದು ಸಹ ಸಚಿವಾಲಯ ತಿಳಿಸಿದೆ.

Comments are closed.