ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆಯ ಕಾರಣಿಕ ಸ್ಥಳವಾದ ಶ್ರೀ ಮಹಾರಾಜ ಮಹಾರಾಜ ಸ್ವಾಮೀ ಶ್ರೀ ವರಾಹ ದೇವಸ್ಥಾನದಲ್ಲಿ ಪ್ರತಿವರ್ಷ ಕರ್ಕಾಟಕ ಅಮವಾಸ್ಯೆ ದಿನದಂದು ನಡೆಯುವ ಜಾತ್ರೆ ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದ್ದು ಈ ಬಾರಿ ಕೊರೋನಾ ಹಿನ್ನೆಲೆ ಜಾತ್ರೆಗೆ ಅವಕಾಶವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಮರವಂತೆ ಗ್ರಾಮದ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ನದಿ ಹಾಗೂ ಸಮುದ್ರದ ನಡುವೆ ಕಂಡುಬರುವ ಪ್ರಕೃತಿ ರಮಣೀಯವಾದ ಧಾರ್ಮಿಕ ಕ್ಷೇತ್ರ ಇದಾಗಿದ್ದು, ಕರ್ಕಾಟಕ ಅಮವಾಸ್ಯೆಯಂದು ಜಾತ್ರೆಗೆ ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಸಮುದ್ರ ಹಾಗೂ ದೇವಸ್ಥಾನದ ಎದುರಿನ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ನಂಬಿಕೆ ಬಹಳ ವಿಶಿಷ್ಟವಾಗಿದ್ದು ರೋಗ ರುಜಿನಾದಿಗಳು ಪರಿಹಾರವಾಗುತ್ತೆ ಎನ್ನುವ ನಂಬಿಕೆಯಿತ್ತು. ಆದರೆ ಈ ಬಾರಿ ತೀರ್ಥ ಸ್ನಾನಕ್ಕೆ ಕಡಿವಾಣವಿತ್ತು. ಸ್ಥಳೀಯವಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಭಿಮಾಶಂಕರ್ ಹಾಗೂ ಸಿಬ್ಬಂದಿಗಳ ತಂಡ ಪರಿಶೀಲಿಸಿ ಒಳಗೆ ಕಳಿಸುತ್ತಿದ್ದು ದೇವಸ್ಥಾನದ ಹೊರಭಾಗದಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿತ್ತು. ಹಣ್ಣು, ಕಾಯಿ ತೀರ್ಥ ಪ್ರಸಾದ ಸೇವೆ ಇರಲಿಲ್ಲ. ಇನ್ನು ಮರವಂತೆ ಹೊರತು ಪಡಿಸಿ ಹೊರಭಾಗದಿಂದ ಬರುವವರು ಹೆದ್ದಾರಿ ಸಮೀಪವೇ ನಿಂತು ಕೈ ಮುಗಿದು ಹೋಗುವ ದೃಶ್ಯ ಕಂಡುಬಂದಿತ್ತು. ಅಲ್ಲದೆ ಹೆದ್ದಾರಿ ಸಮೀಪ ಹುಂಡಿಯನ್ನು ಇಡಲಾಗಿದ್ದು ಭಕ್ತರು ಅಲ್ಲಿಯೇ ಕಾಣಿಕೆ ಸಮರ್ಪಿಸಿದರು.
ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಆಚರಣೆ…
ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಒಂದಷ್ಟು ಆದೇಶ ನೀಡಿದ್ದರು. ಅದರಂತೆಯೇ ಮರವಂತೆ ಗ್ರಾಮದ ಜನರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆಯೇ ಜಿಲ್ಲಾಡಳಿತ, ಸ್ಥಳಿಯಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಜಾತ್ರೆ ನಡೆಯೋದಿಲ್ಲ ಎಂದು ಪ್ರಚಾರ ನೀಡಿದ ಹಿನ್ನೆಲೆ ಭಕ್ತರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಈ ಹಿಂದಿನ ವರ್ಷಗಳಲ್ಲಿ 25 ಸಾವಿರಕ್ಕೂ ಅಧಿಕ ಭಕ್ತರು ಜಮಾವಣೆಯಾಗುತ್ತಿದ್ದು ಈ ಬಾರಿ ಬೆರಳೆಣಿಕೆ ಭಕ್ತರು ಮಾತ್ರ ಕಂಡುಬಂದರು.
ಬೈಂದೂರು ಸಿಪಿಐ ಸುರೇಶ್ ನಾಯಕ್, ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್, ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ತ್ರಾಸಿ ಗ್ರಾ.ಪಂ. ಪಿಡಿಒ ಶೋಭಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದು ಆಗಮಿಸುವ ಭಕ್ತರು ನಿಯಮ ಪಾಲನೆ ಮಾಡುವ ಕುರಿತು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.
ದೇವಸ್ಥಾನದ ಹಿನ್ನೆಲೆ….
ಕರ್ಕಾಟಕ ಅಮವಾಸ್ಯೆಯಂದು ಇಲ್ಲಿ ಬಂದು ಸಮುದ್ರ ಸ್ನಾನ ಮಾಡಿದರೆ ರೋಗ ರುಜಿನಾದಿ ರೋಗಗಳನ್ನು ವರಾಹ ಸ್ವಾಮಿ ಪರಿಹರಿಸುತ್ತಾನೆಂಬ ನಂಬಿಕೆ ಇದೆ. ಹಿಂದಿನಿಂದಲೂ ಮೀನುಗಾರರು ಹಾಗೂ ಕೃಷಿಕರು ಕ್ಷೇತ್ರವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಶ್ರೀ ದೇವರಿಗೆ ಪ್ರಕೃತಿ ವಿಕೋಪವನ್ನು ತಡೆಯುವ ಶಕ್ತಿ ಇದೆ ಎನ್ನುವ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು.ಮತ್ಸ್ಯ ಸಂಪತ್ತು ಕರುಣಿಸಲು ಮತ್ತು ಮೀನುಗಾರರ ಸಂರಕ್ಷಕನಾಗಿಯೂ ಹಾಗೂ ಅಕಾಲಿಕ ಮಳೆ ಮುಂತಾದವುಗಳನ್ನು ತಡೆದು ಸಮೃದ್ಧ ಕೃಷಿಯನ್ನು ಕರುಣಿಸುವ ಶಕ್ತಿ ವರಾಹ ಸ್ವಾಮೀ ದೇವರಿಗೆ ಇದೆ ಎನ್ನುತ್ತಾರೆ ಭಕ್ತರು.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.