ರಾಷ್ಟ್ರೀಯ

ಕೊರೋನಾ ಸೋಂಕು ಹರಡುವಲ್ಲಿ ಚೀನಾ ಹಿಂದಿಕ್ಕಲಿರುವ ಭಾರತ!

Pinterest LinkedIn Tumblr


ನವದೆಹಲಿ(ಮೇ.11): ಕೊರೋನಾ ಸೋಂಕು ತಡೆಯಲೇಬೇಕೆಂದು ದೇಶಕ್ಕೆ ದೇಶವನ್ನೇ ದಿಗ್ಬಂಧನಕ್ಕೊಳಪಡಿಸಲಾಗಿದೆ.‌ ಆದರೂ ಸೋಂಕು ಹರಡುವಿಕೆ ಮಾತ್ರ ಕಮ್ಮಿ ಆಗಿಲ್ಲ. ಇದಕ್ಕಿಂತಲೂ ಆತಂಕದ ಸಂಗತಿ ಎಂದರೆ ದಿನದಿಂದ ದಿನಕ್ಕೆ ಜಾಸ್ತಿ‌ ಆಗುತ್ತಿದ್ದೆ. ಇದಕ್ಕೂ ಮೀರಿದ ಅಪಾಯ ಎಂದರೆ ಈಗ ಪ್ರತಿನಿತ್ಯ ಮೀರ್ನಾಲ್ಕು‌ ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗೆ ಮುಂದುವರೆದರೆ ಕೊರೊನಾ ಸೋಂಕು ಹರಡುವಿಕೆಯಲ್ಲಿ ಚೀನಾವನ್ನೂ ಹಿಂದಿಕ್ಕಲಿದೆ ಭಾರತ ಎಂಬುದು ಮತ್ತೊಂದು ಭಯಾನಕ ವಿಷಯ.

ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 67 ಸಾವಿರ ದಾಟಿದೆ. 67,152ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಸತ್ತವರ ಸಂಖ್ಯೆ 2,206ಕ್ಕೆ ಏರಿಕೆಯಾಗಿದೆ. ಜತೆಗೆ ಈ ಮಾರಕ ಸೋಂಕಿನಿಂದ ಗುಣ ಆದವರು 20,916 ಜನ ಮಾತ್ರ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ. ಇಲ್ಲಿ ನಿನ್ನೆ ಒಂದೇ ದಿನ‌ 4,213 ಹೊಸ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದು ಗಮನಿಸಿರಬೇಕಿರುವ ಅಂಶವಾಗಿದೆ.

ಕಳೆದ ವಾರ ಪ್ರತಿದಿನ‌ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವರದಿಯಾಗುತ್ತಿದ್ದವು. ಆದರೆ ಈ ವಾರದ ಆರಂಭದಲ್ಲೇ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.‌ ಆದುದರಿಂದಾಗಿಯೇ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಭಾರತವು ಶೀಘ್ರವೇ ಚೀನಾವನ್ನು‌ ಹಿಂದಿಕ್ಕಬಹುದು ಎಂದು‌ ಹೇಳಲಾಗುತ್ತಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 6ರಿಂದಲೇ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ಮೂರು ಸಾವಿರಕ್ಕಿಂತಲೂ ಹೆಚ್ಚಾಗಿದೆ. ಮೇ 6ರಂದು 3,561 ಜನರಿಗೆ, ಮೇ 7ರಂದು 3,390 ಮಂದಿಗೆ, ಮೇ 8ರಂದು 3,320 ಜನರಿಗೆ ಮತ್ತು ಮೇ 9ರಂದು 3,277 ಮಂದಿಗೆ ಹೊಸತಾಗಿ ಕೊರೋನಾ ಸೋಂಕು ಹರಡಿತ್ತು.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಮೇಲೆ ಕೊರೋನಾ ಸೋಂಕು ಹರಡುವಿಕೆ ದುಪ್ಪಟ್ಟಾಗಿದೆ. ಸದ್ಯದ ಮಾಹಿತಿ ಪ್ರಕಾರ ಮೇ 17ರ ಬಳಿಕ ಲಾಕ್ಡೌನ್ ಮುಂದುವರೆದರೂ ಬಹಳಷ್ಟು ವಿನಾಯಿತಿಗಳು ಇರಲಿವೆ. ಮೇ 12ರಿಂದ ಪ್ರಯಾಣಿಕರ ರೈಲು ಆರಂಭಿಸುತ್ತಿರುವುದು ಲಾಕ್ಡೌನ್ ಅನ್ನು ಕ್ರಮೇಣ ಕೊನೆಗಾಣಿಸಲಾಗುವುದು ಎಂಬುದರ ಸುಳಿವಾಗಿದೆ. ಲಾಕ್ಡೌನ್ ನಡುವೆಯೇ ತೀವ್ರಗೊಂಡಿದ್ದ ಕೊರೋನಾ ಲಾಕ್ಡೌನ್ ತೆಗೆದಮೇಲೆ ತೆಹಬದಿಗೆ ಬರುತ್ತದೆ ಎಂಬ ಯಾವ ಆಶಾಭಾವವೂ ಇಲ್ಲ.

ಇನ್ನೊಂದೆಡೆ ಜಗತ್ತನ್ನೇ ಜಗ್ಗಾಡುತ್ತಿರುವ ಕೊರೋನಾ‌ ವೈರಸ್​ಗೆ ಜನ್ಮ ನೀಡಿದ ಚೀನಾದಲ್ಲಿ ಈಗ ಕೊರೋನಾ ಸೋಂಕು ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಇಂದಿನ ಅಂಕಿ ಅಂಶಗಳ ಪ್ರಕಾರ ಚೀನಾದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 82,918. ಈ‌ ಪೈಕಿ ಈಗಾಗಲೇ 78,144 ಜನರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಹಂತದಲ್ಲಿರುವವರು 141. ಭಾರತದಲ್ಲಿ ಇನ್ನು 44,029 ಪ್ರಕರಣಗಳು ಆ್ಯಕ್ಟೀವ್ ಆಗಿವೆ. 20,916 ಜನರು ಮಾತ್ರ ಗುಣಮುಖರಾಗಿದ್ದಾರೆ. ಭಾರತ ನಡುವೆ ಈಗ 15,766 ಪ್ರಕರಣಗಳಷ್ಟೇ ವ್ಯತ್ಯಾಸವಿದೆ. ಚೀನಾದಲ್ಲಿ ಕಳೆದೊಂದುವಾರದಿಂದ ಪ್ರತಿನಿತ್ಯ ಒಂದೋ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಆದುದರಿಂದ ವಾರ ಒಪ್ಪತ್ತಿನಲ್ಲೇ ಭಾರತವು ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದೂಡುವ ಸಾಧ್ಯತೆಗಳು ದಟ್ಟವಾಗಿವೆ.

Comments are closed.