ರಾಷ್ಟ್ರೀಯ

ಕಾಡು ಪ್ರಾಣಿಗಳ ಹಾವಳಿ: ತಿರುಪತಿ ದೇಗುಲಕ್ಕೆ ಕಬ್ಬಿಣದ ಬೇಲಿ

Pinterest LinkedIn Tumblr


ತಿರುಮಲ (ಆಂಧ್ರ ಪ್ರದೇಶ): ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಎಲ್ಲ ಧಾರ್ಮಿಕ ಕ್ಷೇತ್ರಗಳಿಗೂ ಈ ನಿಯಮ ಅನ್ವಯವಾಗಿದೆ. ಹಾಗಾಗಿ ವಿಶ್ವದ ಅತಿ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರ ಪ್ರವಾಹ ಏಕಾಏಕಿ ನಿಂತು ಹೋಗಿದೆ.

ಇದರಿಂದಾಗಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ಇದರಿಂದ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೇಗುಲದ ರಕ್ಷಣೆಯಾಗಿ 5 ಅಡಿ ಉದ್ದದ ಕಬ್ಬಿಣದ ಬೇಲಿ ನಿರ್ಮಿಸಲಾಗಿದೆ.

ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶ್ರೀ ಬಾಲಾಜಿ ದೇವಸ್ಥಾನದ ಮಹಾದ್ವಾರದ ಮುಂಭಾಗದಲ್ಲಿ ಐದು ಅಡಿ ಉದ್ದದ ಬೇಲಿ ಹಾಕಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ಭಕ್ತಾದಿಗಳು ಭೇಟಿಕೊಡುವ ಮುಂಚೂಣಿಯ ದೇವಸ್ಥಾನಗಳಲ್ಲಿ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನ ಒಂದಾಗಿದೆ. ಆದರೆ ಈ ಲಾಕ್‌ಡೌನ್ ಅವಧಿಯಲ್ಲಿ ಭಕ್ತಾದಿಗಳ ಅನುಪಸ್ಥಿತಿಯಲ್ಲಿ ತಿರುಮಲ ಬೆಟ್ಟದಲ್ಲಿ ಕರಡಿ, ಕಾಡು ಹಂದಿಗಳು ಸುತ್ತಾಡುತ್ತಿರುತ್ತವೆ ಎಂಬ ಬಗ್ಗೆ ಮಾಹಿತಿಗಳು ಬಂದಿದ್ದವು.

ತಿರುಪತಿಯಿಂದ ತಿರುಮಲ ಬೆಟ್ಟಕ್ಕಿರುವ ರಸ್ತೆ ಸಂಚಾರವು ಸಂಪೂರ್ಣವಾಗಿ ಸ್ಧಗಿತಗೊಂಡಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಲ್ಲೂ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಆತಂಕ ಮನೆ ಮಾಡಿದೆ.

ಏಪ್ರಿಲ್ 14ರಂದು ಲಾಕ್‌ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಲಾಗಿತ್ತು. ಇದರಿಂದಾಗಿ ಭಕ್ತರ ಭೇಟಿಯನ್ನು ಮೇ 3ರ ವರೆಗೆ ರದ್ದುಗೊಳಿಸಲಾಗಿದೆ. ಹಾಗೆಯೇ ಕೊರೊನಾ ವೈರಸ್‌ಗೆ ಸಂಬಂಧ ಎಲ್ಲ ಮಾನದಂಡಗಳನ್ನು ಪಾಲಿಸುವ ಮೂಲಕ ಅರ್ಚಕರು ಪೂಜೆಯನ್ನು ನೆರವೇರಿಸುತ್ತಿದ್ದಾರೆ.

Comments are closed.