ಕರ್ನಾಟಕ

ಪೇಸ್‌ಬುಕ್‌ ಮೂಲಕ ಪ್ರೀತಿ: 50 ಹುಡುಗಿಯರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಅತ್ಯಾಚಾರಿಯ ಬಂಧನ!

Pinterest LinkedIn Tumblr


ಬೆಂಗಳೂರು: ಸಾಮಾಜಿಕ ತಾಣಗಳ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಂಡು, ಪ್ರೀತಿಸುವ ನಾಟಕ ಮಾಡಿ, ಕೆಲ ಕಾಲ ಸುತ್ತಾಡಿಸಿ ನಂಬಿಕೆ ಬರುವಂತೆ ಮಾಡಿ ದೈಹಿಕ ಸಂಪರ್ಕ ಬೆಳೆಸಿ, ವಿಡಿಯೋ/ಫೋಟೊಗಳನ್ನು ಮನೆಯವರಿಗೆ ನೀಡುವುದಾಗಿ ಬೆದರಿಸಿ ಹಣ, ಆಭರಣ ದೋಚುತ್ತಿದ್ದ 26 ವರ್ಷದ ಯುವಕನನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದು, ಆತನ ಕೃತ್ಯಗಳು ಬೆಚ್ಚಿ ಬೀಳಿಸುವಂತಿವೆ.

ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿ ಅಭಿಷೇಕ್‌ಗೌಡ ಎಂ. ಅಲಿಯಾಸ್‌ ಧನುಶ್‌ (26) ಬಂಧಿತ ಆರೋಪಿ. ಈತನಿಂದ 272 ಗ್ರಾಂ ತೂಕದ 10.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಕುರಿತು ದಾಖಲಾಗಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಏ.10 ರಂದು ವ್ಯಕ್ತಿಯೊಬ್ಬರು ಠಾಣೆಗೆ ತೆರಳಿ, ತಮ್ಮ 17 ವರ್ಷದ ಮಗಳನ್ನು ಅಭಿಷೇಕ್‌ ಎಂಬಾತ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಅತ್ಯಾಚಾರ ಮಾಡಿ ಆಕೆಯು ಮನೆಯಿಂದ ಆಭರಣ ಎತ್ತಿಕೊಂಡು ಹೋಗುವಂತೆ ಪ್ರಚೋದಿಸಿದ್ದ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್‌ ಠಾಣೆ ಪೊಲೀಸರು, ಆರೋಪಿ ಸಂಪರ್ಕಕ್ಕೆ ಬಳಸುತ್ತಿದ್ದ ಫೋನ್‌ ಸಂಖ್ಯೆ ಮತ್ತು ಇತರ ಮಾಹಿತಿ ಆಧರಿಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಹಲವು ವರ್ಷಗಳಿಂದ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಆಕೆಯನ್ನು ನಂದಿನಿ ಲೇಔಟ್‌ ಪಾರ್ಕ್‌ನಲ್ಲಿ ಭೇಟಿ ಮಾಡಿ ಸ್ನೇಹ ಬೆಳೆಸಿದ್ದ. ಈ ಅವಧಿಯಲ್ಲಿ ಆರೋಪಿಯು ತನ್ನ ಕುಟುಂಬದವರಿಗೆ ಕಷ್ಟವಿದೆ. ಅದಕ್ಕಾಗಿ ಹಣಕಾಸಿನ ಅಗತ್ಯವಿದೆ ಎಂದು ಹೇಳಿ ಹಣ ಮತ್ತು ಚಿನ್ನಾಭರಣಗಳನ್ನು ಮನೆಯಿಂದ ತರುವಂತೆ ಬಲವಂತ ಮಾಡಿದ್ದ. ಹೀಗಾಗಿ, ಬಾಲಕಿ ಪಾಲಕರಿಗೆ ತಿಳಿಯದಂತೆ ಆಭರಣ ಎತ್ತಿಕೊಂಡು ಹೋಗಿ ಆರೋಪಿಗೆ ನೀಡಿದ್ದಳು. ಕೆಲ ದಿನಗಳ ಬಳಿಕ ಹಣ, ಆಭರಣ ಮರಳಿಸು ಎಂದು ಕೇಳಿದಾಗ ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎಂದು ಪೊಲೀಸ್‌ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅಮಾಯಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಗಳಿಸಿ ಪ್ರೀತಿಸುವಂತೆ ನಾಟಕವಾಡುತ್ತಿದ್ದ. ಕೆಲ ಕಾಲ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. 2019ರಲ್ಲಿ ಅಪ್ರಾಪ್ತೆಯನ್ನು ಫೇಸ್‌ಬುಕ್‌ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ಹಳೇ ಆರೋಪಿ: 2014ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಅಭಿಷೇಕ್‌ ವಿರುದ್ಧ ಮಧುಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೌಡಿ ಪಟ್ಟಿ ತೆರೆಯಲಾಗಿತ್ತು. ಈತನ ವಿರುದ್ಧ ಕಳ್ಳತನ, ಹಲ್ಲೆ, ಜೂಜು, ಅಪಘಾತ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿರುವುದು ಗೊತ್ತಾಗಿದೆ. ಇನ್ನಷ್ಟು ಪ್ರಕರಣಗಳು ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಡಿಸಿಪಿ ಶಶಿಕುಮಾರ್‌ ತಿಳಿಸಿದರು.

ಬೆಂಗಳೂರಿನಲ್ಲಿ ತಾನು ಹೂವಿನ ವ್ಯಾಪಾರಿ ಎಂದು ಹೇಳಿಕೊಂಡಿದ್ದಾನೆ. ಖಾಸಗಿ ಕಾರುಗಳನ್ನು ಓಡಿಸಿಕೊಂಡಿದ್ದಾನೆ. ಮಹಿಳೆಯರನ್ನು ಪರಿಚಯಿಸಿಕೊಂಡು ಡೇಟಿಂಗ್‌, ಪ್ರೀತಿ ನಾಟಕವಾಡಿ ಕಾರಿನಲ್ಲಿ ಸುತ್ತಾಡಿಸುತ್ತಿದ್ದ. ನಂತರ ಪುಸಲಾಯಿಸಿ ದೈಹಿಕ ಸಂಪರ್ಕ ಮಾಡಿ ತನ್ನ ಬಳಿ ವಿಡಿಯೋ ಫೋಟೋಗಳು ಇವೆ. ನಿಮ್ಮ ಮನೆಯಲ್ಲಿ ಹೇಳುತ್ತೇನೆ ಎಂದು ಬೆದರಿಸಿ ಹಣ, ಆಭರಣ ಕಿತ್ತುಕೊಳ್ಳುತ್ತಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.

50 ಮಹಿಳೆಯರ ಜತೆ ಪ್ರೀತಿ ನಾಟಕ, ದೈಹಿಕ ಸಂಪರ್ಕ ಆರೋಪಿ ಅಭಿಷೇಕ್‌ಗೌಡ ಹೆಸರಿನಲ್ಲಿ ತೆರೆದಿರುವ ನಕಲಿ ಫೇಸ್‌ಬುಕ್‌ ಖಾತೆಯಲ್ಲಿ ಬರೋಬ್ಬರಿ 2,314 ಮಹಿಳೆಯರು ಫ್ರೆಂಡ್‌ ಆಗಿದ್ದಾರೆ. ಅದೇ ರೀತಿ ಆರೋಪಿ ಹಲವು ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಹೆಣ್ಣು ಮಕ್ಕಳನ್ನು ಫ್ರೆಂಡ್‌ ಮಾಡಿಕೊಂಡು ಡೈರೆಕ್ಟ್ ಮೆಸೇಜ್‌, ಮೆಸೆಂಜರ್‌ ಆ್ಯಪ್‌ನಲ್ಲಿ ಮೆಸೇಜ್‌ ಕಳುಹಿಸುತ್ತಿದ್ದ. ಅವರ ಮೊಬೈಲ್‌ ನಂಬರ್‌ ಪಡೆದು ಚಾಟ್‌ ಮಾಡುತ್ತಿದ್ದ. ಈ ರೀತಿ ಆರೋಪಿ ಸುಮಾರು 50 ಹೆಣ್ಣು ಮಕ್ಕಳ ಜೊತೆಗೆ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ವಂಚನೆಗೆ ಒಳಗಾದವರು, ನೊಂದವರು ಬೆಂಗಳೂರಿನ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಬಹುದು.
– ಶಶಿಕುಮಾರ್‌, ಡಿಸಿಪಿ, ಉತ್ತರ ವಿಭಾಗ

Comments are closed.