
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಭಾನುವಾರ (ಮಾರ್ಚ್ 8)ರಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸಖತ್ ಶಾಕ್ ಕೊಟ್ಟಿದ್ದರು.
ಹೆಚ್ಚೇನೂ ಹೇಳದೆ ಮೂರು ಸಾಲಿನಲ್ಲಿ ಟ್ವೀಟ್ ಮಾಡಿದ್ದರು. ನರೇಂದ್ರ ಮೋದಿಯವರ ಈ ಟ್ವೀಟ್ಗೆ ಅಪಾರ ಅರ್ಥ ಕಲ್ಪಿಸಿದ ನೆಟ್ಟಿಗರು ಸಾವಿರ ಸಾವಿರ ಪ್ರತಿಕ್ರಿಯೆ ಮಾಡಿದ್ದರು. ಏನಿರಬಹುದು ಇದರ ಅರ್ಥ ಎಂಬುದೇ ದೊಡ್ಡ ಚರ್ಚೆಯಾಗಿ ಹೋಗಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ಸೋಮವಾರ ತಾವು ಮಾಡಿದ ಟ್ವೀಟ್ ಏನೆಂದು ಹೇಳಿದ್ದಾರೆ. ತಾವ್ಯಾಕೆ ಮಾರ್ಚ್ 8ರಂದು ತಮ್ಮ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಅಕೌಂಟ್ಗಳನ್ನು ಬಳಸುವುದಿಲ್ಲ ಎಂಬುದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಈ ಭಾನುವಾರ ಮಹಿಳಾ ದಿನಾಚರಣೆಯಂದು ನಾನು ನನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಅಕೌಂಟ್ನ್ನೂ ಸಾಧಕ ಮಹಿಳೆಯರಿಗೆ ಬಿಟ್ಟುಕೊಡುತ್ತಿದ್ದೇನೆ. ತಮ್ಮ ಜೀವನ ಮತ್ತು ಕೆಲಸದ ಮೂಲಕ ಸ್ಫೂರ್ತಿಯಾದ ಮಹಿಳೆಯರು ನನ್ನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಿದ್ದಾರೆ. ಈ ಮೂಲಕ ದೇಶದ ಕೋಟ್ಯಂತರ ಜನರಿಗೆ ಅವರು ಪ್ರೇರಣೆ ತುಂಬಲು ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಗೇ #SheInspiresUs ಎಂಬ ಹ್ಯಾಷ್ಟ್ಯಾಗ್ನ್ನೂ ಮೋದಿಯವರು ನೀಡಿದ್ದು, ಸಾಧಕ ಮಹಿಳೆಯರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯನ್ನು ಇದೇ ಹ್ಯಾಷ್ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಹೇಳಿದ್ದಾರೆ.
ನೀವು ಅಂತಹ ಸಾಧಕ ಮಹಿಳೆಯರಲ್ಲಿ ಒಬ್ಬರಾದರೆ ಅಥವಾ ನಿಮಗೆ ಅಂತಹವರ ಪರಿಚಯವಿದ್ದರೆ, ನೀವು ಯಾರಿಂದಲಾದರೂ ಪ್ರೇರಣೆಗೆ ಒಳಗಾಗಿದ್ದರೆ ಆ ಬಗ್ಗೆ#SheInspiresUs ಹ್ಯಾಷ್ಟ್ಯಾಗ್ ಬಳಸಿ ನಮ್ಮೊಂದಿಗೆ ಹಂಚಿಕೊಳ್ಳಿ. ಅದಕ್ಕಾಗಿಯೇ ನಾನು ನನ್ನ ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಬಿಟ್ಟುಕೊಡುತ್ತಿದ್ದೇನೆ ಎಂದಿದ್ದಾರೆ. ಹಾಗೇ ಒಂದು ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
Comments are closed.