ಮನೋರಂಜನೆ

ಅರ್ನಬ್‌ ಗೋಸ್ವಾಮಿಗೆ ವಿಮಾನದಲ್ಲಿ ತಮಾಷೆ: ಹಾಸ್ಯ ಕಲಾವಿದನಿಗೆ 6 ತಿಂಗಳು ನಿಷೇಧ..!

Pinterest LinkedIn Tumblr


ಹೊಸದಿಲ್ಲಿ: ಹೆಸರಾಂತ ಟಿವಿ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರು ವಿಮಾನದಲ್ಲಿ ಪ್ರಯಾಣ ಮಾಡುವಾಗ ತಮಾಷೆ ನೆಪದಲ್ಲಿ ಟಾಂಗ್‌ ಕೊಟ್ಟ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರಿಗೆ ಇಂಡಿಗೋ ಹಾಗೂ ಏರ್‌ ಇಂಡಿಯಾ 6 ತಿಂಗಳ ಕಾಲ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದ ಬೆನ್ನಲ್ಲೇ, ಈಗ ಸ್ಪೈಸ್‌ ಜೆಟ್‌ ಹಾಗೂ ಗೋ ಏರ್‌ ವಿಮಾನಯಾನ ಸಂಸ್ಥೆಗಳೂ ಅದೇ ಹಾದಿ ತುಳಿದಿವೆ.

ಮಂಗಳವಾರ ಮುಂಬಯಿನಿಂದ ಲಖನೌಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುನಾಲ್‌ ಕಾಮ್ರಾ ಅವರು ಖಾಸಗಿ ಸುದ್ದಿವಾಹಿನಿಯ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ‘ಇಂದು ಅರ್ನಬ್‌ ಹೇಡಿಯೊ ಅಥವಾ ರಾಷ್ಟ್ರೀಯವಾದಿಯೋ ಎಂಬುದನ್ನು ಜನತೆ ತಿಳಿಯ ಬಯಸುತ್ತಾರೆ. ಅರ್ನಬ್‌ ಇದು ರಾಷ್ಟ್ರೀಯತೆಗೆ ಸಂಬಂಧಿಸಿದ ಪ್ರಮುಖ ವಿಚಾರವಾಗಿದೆ. ನಾನು ತುಕ್ಡೆ ತುಕ್ಡೆ ಗ್ಯಾಂಗ್‌ನ ಭಾಗವಾಗಿದ್ದೇನೆ. ನೀವು ನನ್ನನ್ನು ಅನುಮಾನಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅವರದೇ ಶೈಲಿಯಲ್ಲಿ ಕುಟುಕಿದ್ದರು.

ಕಿವಿಯಲ್ಲಿ ಇಯರ್‌ಫೋನ್‌ ಹಾಕಿಕೊಂಡು ಲ್ಯಾಪ್‌ಟಾಪ್‌ ನೋಡುತ್ತಿದ್ದ ಅರ್ನಬ್‌ಗೆ ಇತ್ತ ಲಕ್ಷ್ಯವಿರಲಿಲ್ಲ. ಸಹ ಪ್ರಯಾಣಿಕರ ಜತೆ ಹೀಗೆ ವರ್ತಿಸಿದ್ದಕ್ಕೆ ಆಕ್ಷೇಪ ತೋರಿ ಈಗ ಸ್ಪೈಸ್‌ ಜೆಟ್‌, ಗೋ ಏರ್‌ ವಿಮಾನಯಾನ ಸಂಸ್ಥೆಗಳು ಕಾಮ್ರಾಗೆ 6 ತಿಂಗಳ ಪ್ರಯಾಣ ನಿಷೇಧ ಹೇರಿವೆ. ಏರ್‌ ಏಷ್ಯಾ ಹಾಗೂ ವಿಸ್ತಾರ ಏರ್‌ಲೈನ್ಸ್‌ಗಳೂ ಕೂಡ ನಿರ್ಬಂಧ ಹೇರುವ ಸುಳಿವು ನೀಡಿವೆ.

ವಿಮಾನಯಾನ ಸಂಸ್ಥೆಗಳ ನಿರ್ಧಾರ ಸರಿಯಲ್ಲ..?

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ನಿಯಮಗಳ ಪ್ರಕಾರ, ಯಾವುದೇ ಪ್ರಯಾಣಿಕ ವಿಮಾನಯಾನ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ, ಆತನ ಪ್ರಕರಣದ ಕುರಿತಾಗಿ ಆಂತರಿಕ ತನಿಖೆ ನಡೆಸಬೇಕು. 30 ದಿನಗಳ ಒಳಗೆ ತನಿಖಾ ವರದಿ ನೀಡಿ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರಿಗೆ ಈ ಆಂತರಿಕ ತನಿಖೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಅಧಿಕಾರವೂ ಇದೆ. ಎಲ್ಲಕ್ಕಿಂತಾ ಹೆಚ್ಚಾಗಿ ಪ್ರಯಾಣಿಕರಿಗೆ ಕೇವಲ 30 ದಿನಗಳ ನಿಷೇಧವನ್ನು ಮಾತ್ರ ಏರಲು ಸಾಧ್ಯ. 6 ತಿಂಗಳ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

Comments are closed.