ರಾಷ್ಟ್ರೀಯ

ಒತ್ತಡಕ್ಕೆ ಮಣಿದು ಸಿಎಎ ವಿರೋಧಿ ಭಾಷಣ ಓದಿದ ರಾಜ್ಯಪಾಲ

Pinterest LinkedIn Tumblr


ತಿರುವನಂತಪುರಂ (ಕೇರಳ): ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರಿಗೇ ಪ್ರತಿಪಕ್ಷ ಶಾಸಕರು ಘೇರಾವ್‌ ಹಾಕಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಬಜೆಟ್‌ ಅಧಿವೇಶನದಲ್ಲಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಪ್ರತಿಪಕ್ಷ ಯುಡಿಎಫ್‌ ಶಾಸಕರು ಘೇರಾವ್‌ ಹಾಕಿದರು. ರಾಜ್ಯಪಾಲರು ಸದನ ಪ್ರವೇಶಿಸುತ್ತಲೇ, ಸದನದ ಬಾವಿಯಲ್ಲೇ ಅವರನ್ನು ತಡೆದ ಶಾಸಕರು, ‘ಗೋ ಬ್ಯಾಕ್‌ ಗವರ್ನರ್‌’ ಎಂದು ಘೋಷಣೆ ಕೂಗಿದರು.

ಸುಮಾರು ಹತ್ತು ನಿಮಿಷ ಕಾಲ ರಾಜ್ಯಪಾಲರು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ಗದ್ದಲ ಮಾಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಸ್ಪೀಕರ್‌ ಪಿ.ಶ್ರೀರಾಮಕೃಷ್ಣನ್‌ ಅವರು ಸಂಪ್ರದಾಯದಂತೆ ರಾಜ್ಯಪಾಲರನ್ನು ಸದನಕ್ಕೆ ಕರೆ ತಂದಿದ್ದರು. ಪ್ರತಿಪಕ್ಷ ಸದಸ್ಯರ ಪ್ರತಿಭಟನೆಯ ಬಿಸಿ ಇವರಿಗೂ ತಟ್ಟಿತು. ನಂತರ ಸದನದ ಮಾರ್ಷಲ್‌ಗಳ ರಕ್ಷ ಣೆಯೊಂದಿಗೆ ಭಾಷಣ ಮಾಡಲು ಸ್ಪೀಕರ್‌ ವೇದಿಕೆಯತ್ತ ತೆರಳಿದರು. ಪ್ರತಿಪಕ್ಷ ಶಾಸಕರ ಗದ್ದಲ, ಪ್ರತಿಭಟನೆ, ಸಭಾತ್ಯಾಗದ ನಡುವೆಯೇ ಸ್ಪೀಕರ್‌ ಭಾಷಣವನ್ನು ಓದಿದರು.

ಸಿಎಎ ವಿರುದ್ಧ ನಿರ್ಣಯ ಓದಿದ ಗವರ್ನರ್‌: ಅಧಿವೇಶನದಲ್ಲಿ ರಾಜ್ಯಪಾಲರು ಸಾಂಪ್ರದಾಯಿಕವಾಗಿ ಸರಕಾರದ ಯೋಜನೆಗಳ ಕುರಿತು ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ, ಸಿಎಎ ವಿರುದ್ಧ ರಾಜ್ಯ ವಿಧಾನಸಭೆ ಅನುಮೋದಿಸಿರುವ ನಿರ್ಣಯದ ಬಗ್ಗೆಯೂ ಉಲ್ಲೇಖಿಸುವ ಮೂಲಕ ರಾಜ್ಯಪಾಲರು ಗಮನ ಸೆಳೆದರು.

ಸಿಎಎ ಪರ ನಿಲುವ ಹೊಂದಿರುವ ರಾಜ್ಯಪಾಲರು, ಕಾಯಿದೆ ವಿರುದ್ಧ ಕೇರಳ ಸರಕಾರ ಕೈಗೊಂಡಿರುವ ನಿಲುವನ್ನು ಬಲವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಏರಿರುವ ಕೇರಳ ಸರಕಾರದ ನಡೆಯ ಬಗ್ಗೆಯೂ ಅಸಮಾಧಾನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾಷಣದಲ್ಲಿ ಸಿಎಎ ವಿರುದ್ಧ ನಿರ್ಣಯದ ಬಗ್ಗೆ ಉಲ್ಲೇಖಿಸುವುದಿಲ್ಲ. ಒಂದು ವೇಳೆ ಮುದ್ರಿತ ಪ್ರತಿಯಲ್ಲಿ ಸರಕಾರ ಅದನ್ನು ಉಲ್ಲೇಖಿಸಿದ್ದರೆ ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ, ಆ ಪ್ಯಾರಾವನ್ನು ಓದದೆ ಬಿಡುವುದಾಗಿ ಹೇಳಿದ್ದರು. ಹೀಗಾಗಿ ರಾಜ್ಯಪಾಲರು ಭಾಷಣದಲ್ಲಿ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ, ರಾಜ್ಯಪಾಲರು ಭಾಷಣದಲ್ಲಿ ಸಿಎಎ ಪರ ಸರಕಾರದ ನಿರ್ಣಯವನ್ನು ಉಲ್ಲೇಖಿಸಿದ್ದು ‘ನಮ್ಮ ಪೌರತ್ವವನ್ನು ಧರ್ಮದ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಇದು ಸಂವಿಧಾನದ ಮೂಲಾಂಶವಾದ ಜ್ಯಾತ್ಯತೀತತೆ ತತ್ವಕ್ಕೆ ವಿರುದ್ಧವಾದುದು’ ಎಂದು ಹೇಳಿದರು. ‘ಬಲಿಷ್ಠ ರಾಜ್ಯ ಮತ್ತು ಬಲಿಷ್ಠ ಕೇಂದ್ರ ಸರಕಾರಗಳು ಒಕ್ಕೂಟ ವ್ಯವಸ್ಥೆಯ ಕಂಬಗಳಿದ್ದಂತೆ. ರಾಜ್ಯಗಳು ಎತ್ತುವ ನೈಜ ಆಕ್ಷೇಪಗಳನ್ನು ಕೇಂದ್ರ ಸರಕಾರ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಸಕಾರಾತ್ಮಕವಾಗಿ ಪರಿಗಣಿಸಬೇಕು. ಅದರಲ್ಲೂ ಸಂವಿಧಾನದ ಮೌಲ್ಯಗಳು ಇರುವಂತಹ ವಿಚಾರಗಳಲ್ಲಿ ಮತ್ತಷ್ಟು ಗಂಭೀರವಾಗಿ ಪರಿಗಣಿಸಬೇಕು’ ಎಂದು ರಾಜ್ಯಪಾಲರು ಹೇಳಿದರು.

ಸಿಎಂ ಪತ್ರ: ಭಾಷಣದ ಪ್ರತಿಯನ್ನು ತಿದ್ದಿಕೊಳ್ಳದೆ ಅಥವಾ ಅದರಲ್ಲಿರುವ ಯಾವುದೇ ಪ್ಯಾರಾವನ್ನು ಬಿಡದೆ ಸಂಪೂರ್ಣವಾಗಿ ಓದಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬುಧವಾರ ಬೆಳಗ್ಗೆ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಸಿಎಎ ಕುರಿತ ಪ್ಯಾರಾವನ್ನು ಓದುವ ಮೊದಲು ರಾಜ್ಯಪಾಲರು ಈ ವಿಷಯವನ್ನು ಹೇಳಿಯೇ ಮುಂದುವರಿದರು. ‘ಮುಖ್ಯಮಂತ್ರಿಯವರಿಗೆ ಗೌರವ ನೀಡಿ, ಸರಕಾರದ ನೀತಿ-ಯೋಜನೆಗಳ ಕುರಿತಾದ ಭಾಷಣವನ್ನು ಯಥಾವತ್ತಾಗಿ ಓದುತ್ತಿದ್ದೇನೆ’ ಎಂದು ತಿಳಿಸಿದರಲ್ಲದೆ, ‘ಇದು ಸರಕಾರದ ನಿಲುವಷ್ಟೆ. ಸಿಎಎ ವಿಚಾರದಲ್ಲಿ ನನ್ನ ನಿಲುವು ಬದಲಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ದೇಶದ್ರೋಹ ಪ್ರಕರಣದ ಆರೋಪಿ, ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ಬಂಧನ

Comments are closed.