ರಾಷ್ಟ್ರೀಯ

ದುಬೈನಿಂದ ನಕಲಿ ರೈಲ್ವೆ ಟಿಕೆಟ್‌ ಜಾಲ: ಇಬ್ಬರ ಬಂಧನ

Pinterest LinkedIn Tumblr


ಹೊಸದಿಲ್ಲಿ: ಅನಧಿಕೃತವಾಗಿ ರೈಲ್ವೆ ಇ-ಟಿಕೆಟ್‌ ಬುಕ್‌ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ರೈಲ್ವೆ ಸುರಕ್ಷತಾ ದಳ (ಆರ್‌ಪಿಎಫ್‌) ಪೊಲೀಸರು, ಈ ಜಾಲವು ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳವರೆಗೂ ವ್ಯಾಪಿಸಿರುವುದನ್ನು ಪತ್ತೆ ಮಾಡಿದ್ದು, ಬೆಂಗಳೂರಿನ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಜಾಲದ ಕಿಂಗ್‌ಪಿನ್‌ ಹಮಿದ್‌ ಆಶ್ರಫ್‌ ಮೂಲತಃ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯವನಾಗಿದ್ದು, ಈಗ ದುಬೈನಲ್ಲಿ ನೆಲೆಸಿರುವುದನ್ನು ಆರ್‌ಪಿಎಫ್‌ ಪತ್ತೆ ಮಾಡಿದೆ. ಅನಧಿಕೃತ ಇ-ಟಿಕೆಟ್‌ ದಂಧೆಯಲ್ಲಿ ನಿರತನಾಗಿದ್ದ ಜಾರ್ಖಂಡ್‌ನ ಗುಲಾಮ್‌ ಮುಸ್ತಫಾ (26) ಮತ್ತು ಆತನ ಸಹಾಯಕನಾಗಿದ್ದ ಬೆಂಗಳೂರಿನ ಪೀಣ್ಯ ನಿವಾಸಿ ಹನುಮಂತರಾಜು ಎಂ. (37) ಅವರನ್ನು ಬಂಧಿಸಲಾಗಿದೆ.

ಮಂಗಳವಾರ ಸುದ್ದಿಗಾರರಿಗೆ ಈ ಕುರಿತು ವಿವರ ನೀಡಿದ ಆರ್‌ಪಿಎಫ್‌ ಮಹಾನಿರ್ದೇಶಕ ಅರುಣ್‌ ಕುಮತ್‌ ಅವರು, ”ಈ ಇಬ್ಬರ ಬಂಧನದಿಂದ ಅನಧಿಕೃತ ಇ-ಟಿಕೆಟ್‌ ದಂಧೆ ವಿರುದ್ಧ ನಾವು ನಡೆಸುತ್ತಿರುವ ನಿರ್ಣಾಯಕ ಹಂತಕ್ಕೆ ಬಂದಿದೆ. ದುಬೈನಲ್ಲಿನೆಲೆಸಿರುವ ಕಿಂಗ್‌ಪಿನ್‌ನನ್ನು ಶೀಘ್ರವೇ ಬಂಧಿಸುತ್ತೇವೆ,” ಎಂದು ತಿಳಿಸಿದರು.

”ಈ ಜಾಲವು ರೈಲ್ವೆ ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡಿ ಟಿಕೆಟ್‌ ಬುಕಿಂಗ್‌ ಸಾಫ್ಟ್‌ವೇರ್‌ ಅನ್ನು ನಕಲು ಮಾಡಿತ್ತು. ಇದರಿಂದ ಭಾರತೀಯ ರೈಲ್ವೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿರುವ ಸಾಧ್ಯತೆ ಇದೆ. ಅನಧಿಕೃತ ಇ-ಟಿಕೆಟ್‌ ಬುಕಿಂಗ್‌ ಮೂಲಕ ಗಳಿಸಿದ ಲಾಭವನ್ನು ಹವಾಲಾ ಮೂಲಕ ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ರವಾನಿಸಲಾಗುತ್ತಿದೆ. ಭಾರತ ವಿರೋಧಿ ಕೃತ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ತನಿಖೆ ವೇಳೆ ಬಯಲಿಗೆ ಬಂದಿದೆ,” ಎಂದು ಅರುಣ್‌ ಮಾಹಿತಿ ನೀಡಿದರು.

ಜಾಲದ ಕಾರ್ಯನಿರ್ವಹಣೆ ಹೇಗೆ?
– ಮುಸ್ತಫಾ 2017ರಲ್ಲಿ ಇ-ಟಿಕೆಟ್‌ ಬುಕಿಂಗ್‌ಗಾಗಿ ಭಾರತೀಯ ರೈಲ್ವೆ ಕೇಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ)ನಿಂದ ಏಜೆಂಟ್‌ ಐಡಿ ಪಡೆದಿದ್ದ. ನಂತರ ತಾನೇ ನೂರಾರು ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡಿದ್ದ.

– ಐಆರ್‌ಸಿಟಿಸಿ ವೆಬ್‌ಸೈಟ್‌ ಅನ್ನೇ ಹ್ಯಾಕ್‌ ಮಾಡಿ ಟಿಕೆಟ್‌ ಬುಕಿಂಗ್‌ ಸಾಫ್ಟ್‌ವೇರ್‌ ಅನ್ನು ನಕಲು ಮಾಡಿದ್ದ. ಹೀಗೆ ನಕಲು ಮಾಡಿದ ಸಾಫ್ಟ್‌ವೇರ್‌ ಮತ್ತು ನಕಲಿ ಐಡಿಗಳ ನೆರವಿನಿಂದ ಸಹಚರರ ಮೂಲಕ ನಿತ್ಯ ಸಾವಿರಾರು ಟಿಕೆಟ್‌ಗಳನ್ನು ಬುಕ್‌ ಮಾಡಿ ಮಾರಾಟ ಮಾಡುತ್ತಿದ್ದ.

– ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿಒಂದು ಟಿಕೆಟ್‌ ಬುಕ್‌ ಮಾಡಲು ಎರಡು ನಿಮಿಷ ಸಮಯ ಬೇಕು. ಆದರೆ ಮುಸ್ತಫಾ ಕೇವಲ 10-15 ಸೆಕೆಂಡ್‌ಗಳಲ್ಲಿ150-200 ಟಿಕೆಟ್‌ ಬುಕ್‌ ಮಾಡುತ್ತಿದ್ದ!

ಪಾಕಿಸ್ತಾನದ ಸಾಫ್ಟ್‌ವೇರ್‌ ವಶಕ್ಕೆ
ಆರ್‌ಪಿಎಫ್‌ ತನಿಖೆ ವೇಳೆ ಗುಲಾಮ್‌ ಮುಸ್ತಫಾನಿಂದ ಪಾಕಿಸ್ತಾನದ ಮೂಲದ ಸಾಫ್ಟ್‌ವೇರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೂಲಕ ಕೇಂದ್ರ ಸರಕಾರದ ಪ್ರಮುಖ ವೆಬ್‌ಸೈಟ್‌ಗಳು ಮತ್ತು ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡುವ ಉದ್ದೇಶ ಹೊಂದಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಆಘಾತಕಾರಿ ಸಂಗತಿ ಎಂದರೆ ಕೇಂದ್ರ ಸರಕಾರದ ಕೆಲವು ವೆಬ್‌ಸೈಟ್‌ಗಳನ್ನು ಪ್ರವೇಶಿಸಿ ಮಾಹಿತಿ ಕಳ್ಳತನ ಮಾಡುವಲ್ಲಿಯಶಸ್ವಿಯಾಗಿದ್ದ! ನಕಲಿ ಆಧಾರ್‌, ನಕಲಿ ಪ್ಯಾನ್‌ಕಾರ್ಡ್‌ ಮತ್ತು ಇತರ ಖೊಟ್ಟಿ ಸರಕಾರಿ ದಾಖಲಾತಿಗಳ ಸೃಷ್ಟಿಗೆ ಬಳಸುತ್ತಿದ್ದ ಸಾಫ್ಟ್‌ವೇರ್‌ ಅನ್ನೂ ಆತನಿಂದ ವಶಪಡಿಸಿಕೊಳ್ಳಲಾಗಿದೆ.

ಕಳೆದ ವರ್ಷ ಸಿಕ್ಕಿಬಿದ್ದಿದ್ದ ತತ್ಕಾಲ್‌ ಚೋರ
ಕೇಂದ್ರ ರೈಲ್ವೆ ಅಧಿಕಾರಿಗಳು ವರ್ಷದ ಹಿಂದೆ ಮುಂಬಯಿಯಲ್ಲಿ ನಕಲಿ ತತ್ಕಾಲ್‌ ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿದ್ದ ಆರೋಪದಲ್ಲಿ ಸಲ್ಮಾನ್‌ ಖಾನ್‌ ಎಂಬಾತನನ್ನು ಬಂಧಿಸಿದ್ದರು. ಆತ ಒಂದು ದಿನಕ್ಕೆ 6,000 ನಕಲಿ ಟಿಕೆಟ್‌ ಬುಕ್‌ ಮಾಡುತ್ತಿದ್ದ ಮತ್ತು ಪ್ರತಿ ಟಿಕೆಟ್‌ಗೆ ಏಜೆಂಟರಿಂದ 700 ರೂ.ಶುಲ್ಕ ಪಡೆಯುತ್ತಿದ್ದ. ದೇಶಾದ್ಯಂತ ಆತ 5,400 ಏಜೆಂಟರ ಜಾಲ ಹೊಂದಿದ್ದ! ಗುಲಾಮ್‌ ಮುಸ್ತಫಾ ಜಾಲದಲ್ಲಿ ಎಷ್ಟು ಏಜೆಂಟರಿದ್ದಾರೆ ಎನ್ನುವುದು ಇನ್ನೂ ಬೆಳಕಿಗೆ ಬರಬೇಕಿದೆ.

ತತ್ಕಾಲ್‌ ಟಿಕೆಟ್‌ಗಳ ದಂಧೆಕೋರ ಸಲ್ಮಾನ್‌ ‘ಕೌಂಟರ್‌’ ಎಂಬ ಸಾಫ್ಟ್‌ವೇರ್‌ ಬಳಸುತ್ತಿದ್ದ. ಇದರ ಮೂಲಕ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಹಲವಾರು ವಿಂಡೋಗಳನ್ನು ಏಕಕಾಲದಲ್ಲಿ ತೆರೆಯಬಹುದಾಗಿತ್ತು. ಬುಕಿಂಗ್‌ ಆರಂಭವಾಗುವ ಮುನ್ನ ಎಲ್ಲ ವಿಂಡೋಗಳಲ್ಲಿಯೂ ಮಾಹಿತಿ ಭರ್ತಿ ಮಾಡಿರಲಾಗುತ್ತಿತ್ತು. ತತ್ಕಾಲ್‌ ಬುಕಿಂಗ್‌ ಆರಂಭವಾಗುತ್ತಿದ್ದಂತೆಯೇ ಐಆರ್‌ಸಿಟಿಸಿ ಕ್ಯಾಪ್ಚಾ ಮತ್ತು ಬ್ಯಾಂಕ್‌ ಒಟಿಪಿಗಳ ನೆರವಿಲ್ಲದೆ ಐಆರ್‌ಸಿಟಿಸಿ ವೆಬ್‌ ಜಾಲದ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿತ್ತು. ಕೇವಲ 30-40 ಸೆಕೆಂಡ್‌ಗಳಲ್ಲಿ ನೂರಾರು ತತ್ಕಾಲ್‌ ಟಿಕೆಟ್‌ಗಳು ಬುಕ್‌ ಆಗುತ್ತಿದ್ದವು. ತತ್ಕಾಲ್‌ ಟಿಕೆಟ್‌ಗಳ ಸಂಖ್ಯೆ ಸೀಮಿತವಾಗಿರುವುದರಿಂದ ನಿಜವಾಗಲೂ ಅಗತ್ಯ ಇರುವವರು ಟಿಕೆಟ್‌ ವಂಚಿತರಾಗುತ್ತಿದ್ದರು.

Comments are closed.