ರಾಷ್ಟ್ರೀಯ

ಅಯೋಧ್ಯೆ; ಎಐಎಂಪಿಎಲ್ ಬಿಗೆ ಮೇಲ್ಮನವಿ ಸಲ್ಲಿಸಲು ಅಧಿಕಾರವಿಲ್ಲ; ಅಖಿಲ ಭಾರತ ಹಿಂದೂ ಮಹಸಭಾದ ವಕೀಲ ಸಿನ್ನಾ

Pinterest LinkedIn Tumblr


ನವದೆಹಲಿ: ಹಲವು ದಶಕಗಳ ಕಾಲ ಇತ್ಯರ್ಥವಾಗದೇ ಉಳಿದಿದ್ದ ಅಯೋಧ್ಯೆ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪಂಚಸದಸ್ಯ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಕೋರಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ ಬಿ) ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಆದರೆ ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಎಐಎಂಪಿಎಲ್ ಬಿ ಕಕ್ಷಿದಾರರಲ್ಲ. ಹೀಗಾಗಿ ಮಂಡಳಿಗೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಇಲ್ಲ ಎಂದು ಅಖಿಲ ಭಾರತ ಹಿಂದೂ ಮಹಸಭಾದ ವಕೀಲರಾದ ವರುಣ್ ಸಿನ್ನಾ ತಿಳಿಸಿದ್ದಾರೆ.

ಅಯೋಧ್ಯೆ ವಿವಾದ ಪ್ರಕರಣದಲ್ಲಿ ಎಐಎಂಪಿಎಲ್ ಬಿ ಕಕ್ಷಿದಾರರಲ್ಲ. ಸುನ್ನಿ ವಕ್ಫ್ ಬೋರ್ಡ್ ಗೆ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವ ಅಧಿಕಾರವಿದೆ. ಪ್ರಕರಣದಲ್ಲಿ ಯಾರು ಅರ್ಜಿದಾರರಿದ್ದಾರೋ ಅವರು ಮಾತ್ರ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಅಯೋಧ್ಯೆ ಭೂ ವಿವಾದದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎಲ್ಲಾ ರೀತಿಯ ಹಾಗೂ ಪ್ರತಿಯೊಂದು ಆಯಾಮಗಳನ್ನ ಪರಿಶೀಲಿಸಿ, ಮುಸ್ಲಿಮರು ವಿವಾದಿತ ಜಾಗದಲ್ಲಿ ಯಾವುದೇ ಕಟ್ಟಡವನ್ನಾಗಲಿ, ಮಸೀದಿಯನ್ನಾಗಲಿ ಕಟ್ಟಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಆದರೆ ಎಐಎಂಪಿಎಲ್ ಬಿ ತೀರ್ಪಿನಲ್ಲಿ ತಪ್ಪಾಗಿದೆ ಹೇಗೆ ಪತ್ತೆ ಹಚ್ಚಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಸಿನ್ನಾ ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ಪಂಚಸದಸ್ಯ ಸಾಂವಿಧಾನಿಕ ಪೀಠ ನೀಡಿರುವ ಅಂತಿಮ ತೀರ್ಪಿನ ಬಗ್ಗೆ ಯಾವುದೇ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ.

Comments are closed.