ರಾಷ್ಟ್ರೀಯ

ಬ್ರು ನಿರಾಶ್ರಿತರ ಶಿಬಿರದಲ್ಲಿ ನಾಲ್ಕು ತಿಂಗಳ ಮಗುವೊಂದು ಸಾವು

Pinterest LinkedIn Tumblr

ಅಗರ್ತಲಾ: ಉತ್ತರ ತ್ರಿಪುರಾ ಜಿಲ್ಲೆಯಲ್ಲಿನ ಹಂಸಪಾರಾ ಬ್ರು ನಿರಾಶ್ರಿತರ ಶಿಬಿರದಲ್ಲಿ ಸೋಮವಾರ ಬೆಳಗ್ಗೆ ನಾಲ್ಕು ತಿಂಗಳ ಮಗುವೊಂದು ಸಾವನ್ನಪ್ಪಿದ್ದು,ಹಸಿವು ಇದಕ್ಕೆ ಕಾರಣವೆನ್ನಲಾಗಿದೆ. ಇದರೊಂದಿಗೆ ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶದಂತೆ ಆಡಳಿತವು ಹಂಗಾಮಿ ಶಿಬಿರಗಳಿಗೆ ಪಡಿತರ ಪೂರೈಕೆಯನ್ನು ನಿಲ್ಲಿಸಿದ ಬಳಿಕ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೇರಿದೆ. ನೈಸಿಂಗಪಾರಾ ಶಿಬಿರದಲ್ಲಿ ಗುರುವಾರ ಇಬ್ಬರು ಮತ್ತು ರವಿವಾರ ಮೂವರು ಮೃತಪಟ್ಟಿದ್ದರು.

ತನ್ಮಧ್ಯೆ ತಮಗೆ ಪಡಿತರ ಪೂರೈಕೆ ಮತ್ತು ನಗದು ನೀಡಿಕೆಯನ್ನು ನಿಲ್ಲಿಸಿರುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಯ ಅಂಗವಾಗಿ ನಿರಾಶ್ರಿತರು ಅ.1ರಂದು ಉತ್ತರ ತಿಪುರಾದ ದಾಸ್ಡಾ ಮತ್ತು ಆನಂದನಗರ ಮಧ್ಯೆ ನಡೆಸುತ್ತಿರುವ ರಸ್ತೆ ತಡೆ ಸೋಮವಾರವೂ ಮುಂದುವರಿದಿದೆ.

ಈ ವರ್ಷದ ಅಂತ್ಯದೊಳಗೆ ಎಲ್ಲ ಬ್ರು ನಿರಾಶ್ರಿತರನ್ನು ಮಿಜೋರಮ್‌ಗೆ ವಾಪಸ್ ಕಳುಹಿಸಲು ತ್ರಿಪುರಾ ಸರಕಾರವು ಉದ್ದೇಶಿಸಿದ್ದು,ವಾಪಸಾತಿಯ ಒಂಭತ್ತನೇ ಹಂತ ಅ.3ರಿಂದ ಆರಂಭಗೊಂಡಿದೆ.
ತಮ್ಮ ಬೇಡಿಕೆಗಳು ಈಡೇರುವವರೆಗೆ ರಸ್ತೆ ತಡೆಯು ಮುಂದುವರಿಯಲಿದೆ ಎಂದು ಹೇಳಿದ ಮಿಜೋರಂ ಬ್ರು ನಿರಾಶ್ರಿತರ ವೇದಿಕೆಯ ಉಪಾಧ್ಯಕ್ಷ ಆರ್.ಡಾಂಗ್ಲಿಯಾನಾ ಅವರು,ಪಡಿತರ ಮತ್ತು ನಗದು ನೀಡಿಕೆಯನ್ನು ಅ.30ರಿಂದ ಸ್ಥಗಿತಗೊಳಿಸಲಾಗಿದೆ ಮತ್ತು ಅ.3ರಂದು ಆರಂಭಗೊಂಡಿರುವ ವಾಪಸಾತಿ ಪ್ರಕ್ರಿಯೆಯು ನ.30ರಂದು ಅಂತ್ಯಗೊಳ್ಳಲಿದೆ. ಅಲ್ಲಿಯವರೆಗೆ ನಾವು ಬದುಕುಳಿಯುವುದು ಹೇಗೆ ಎಂದು ಪ್ರಶ್ನಿಸಿದರು.

ಶೇ.80ರಷ್ಟು ಕುಟುಂಬಗಳು ಉಪವಾಸ ಬಿದ್ದಿವೆ ಎಂದ ಅವರು ಕಳೆದ ವಾರದಿಂದ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗುವ ಬಗ್ಗೆ ಎಚ್ಚರಿಕೆ ನೀಡಿದರು.

ಪ್ರತಿ ನಿರಾಶ್ರಿತ ವ್ಯಕ್ತಿಗೆ ಪ್ರತಿದಿನ 600 ಗ್ರಾಂ ಅಕ್ಕಿಯನ್ನು ನೀಡಲಾಗುತ್ತಿತ್ತು ಮತ್ತು ಈ ಪೈಕಿ ಅರ್ಧದಷ್ಟು ಮಕ್ಕಳಿಗೇ ಖರ್ಚಾಗುತ್ತಿತ್ತು. ಪ್ರತಿ ದಿನ ವಯಸ್ಕರಿಗೆ ತಲಾ 5 ರೂ. ಮತ್ತು ಮಕ್ಕಳಿಗೆ 2.50 ರೂ.ನೀಡಲಾಗುತ್ತಿತ್ತು. ನಮಗೆ ಬೇರೆ ಯಾವುದೇ ಹೆಚ್ಚುವರಿ ಆದಾಯವಿಲ್ಲ ಮತ್ತು ಇದೇ ಕಾರಣದಿಂದ ಇಂದು ಹೆಚ್ಚಿನವರು ಹಸಿವೆಯಿಂದ ನರಳುತ್ತಿದ್ದಾರೆ ಎಂದರು. ಅ.3ರಿಂದೀಚಿಗೆ 216 ಬ್ರು ಕುಟುಂಬಗಳು ಮಿಜೋರಮ್‌ಗೆ ಮರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1997ರಲ್ಲಿ ಮಿಜೋರಮ್‌ನಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಜೀವವುಳಿಸಿಕೊಳ್ಳಲು ಅಲ್ಲಿಂದ ಪರಾರಿಯಾಗಿದ್ದ 32,000ಕ್ಕೂ ಅಧಿಕ ಬ್ರು ನಿರಾಶ್ರಿತರು ತ್ರಿಪುರಾದಲ್ಲಿಯ ಆರು ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದಾರೆ.

Comments are closed.