ರಾಷ್ಟ್ರೀಯ

ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸಲು ತೆಲಂಗಾಣ ಸರಕಾರ ಘೋಷಣೆ

Pinterest LinkedIn Tumblr

ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಕಳೆದ ಒಂದು ತಿಂಗಳಿನಿಂದ ಮುಂದುವರೆದಿದೆ. ನಾಲ್ಕು ಮಂದಿ ಬಲಿ ಪಡೆದಿರುವ ಈ ಮುಷ್ಕರ ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಇನ್ನೊಂದೆಡೆ ನೌಕರರ ಬೇಡಿಕೆಗೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವತ್ತ ಕೆ ಚಂದ್ರಶೇಖರ ರಾವ್ ಸರ್ಕಾರ ಹೆಜ್ಜೆ ಇಟ್ಟಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಶೇ.50ರಷ್ಟು ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಭಾನುವಾರದಂದು ಘೋಷಿಸಿದ್ದಾರೆ. ಜೊತೆಗೆ ಮುಷ್ಕರ ನಿರತ ಕಾರ್ಮಿಕರು ಇನ್ನು ಮೂರು ದಿನದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮತ್ತೊಮ್ಮೆ ಗಡುವು ನೀಡಿದ್ದಾರೆ.

ಹೈದರಾಬಾದಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿ ಚಂದ್ರಶೇಖರ್ ರಾವ್,”ಸುಮಾರು 5,100 ಖಾಸಗಿ ಬಸ್‌ಗಳಿಗೆ ನಿರ್ದಿಷ್ಟ ರೂಟ್‌ಗಳಲ್ಲಿ ಸಂಚರಿಸಲು ಪರ್ಮಿಟ್ ನೀಡಲಾಗುವುದು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಎಸ್‌ಆರ್‌ಟಿಸಿ)10,400 ಬಸ್‌ಗಳನ್ನು ಓಡಿಸುತ್ತಿದ್ದು, ಇದರಲ್ಲಿ 2,000 ಬಸ್‌ಗಳನ್ನು ಈಗಾಗಲೇ ಖಾಸಗೀಕರಣಗೊಳಿಸಲಾಗಿದ್ದು, ಇನ್ನೂ 2,000 ಬಸ್‌ಗಳು ಕೆಟ್ಟುಹೋಗಿವೆ” ಎಂದಿದ್ದಾರೆ. ಆದರೆ, ಸರ್ಕಾರ ಜೊತೆ ಟಿಎಸ್ ಆರ್ ಟಿಸಿ ಸಂಪೂರ್ಣ ವಿಲೀನದ ಬಗ್ಗೆ ಬಂದಿರುವ ಸುದ್ದಿಯನ್ನು ಚಂದ್ರಶೇಖರ್ ಅಲ್ಲಗೆಳೆದಿದ್ದಾರೆ. 57 ವಿವಿಧ ನಿಗಮಗಳು ಕೂಡಾ ಇದೇ ಹಾದಿಯಲ್ಲಿ ಸಾಗಿ ವಿಲೀನಕ್ಕೆ ಒತ್ತಡ ಹೇರುವ ಸಾಧ್ಯತೆ ಉಂಟಾಗಬಹುದು ಎಂದಿದ್ದಾರೆ.

“ರಾಜ್ಯ ಸಾರಿಗೆ ಸಂಸ್ಥೆ ಖಾಸಗೀಕರಣಯನ್ನು ಎಲ್ಲಾ ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ. ಖಾಸಗಿ ಬಸ್ ಗಳು ಲಾಭದತ್ತ ಕೊಂಡೊಯ್ಯಲಿವೆ. 75 ಪೈಸೆ ಪ್ರತಿ ಕಿಲೋ ಮೀಟರ್ ನಂತೆ ಕಾರ್ಯ ನಿರ್ವಹಿಸಲಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್ ನಷ್ಟ ಹೊಂದುತ್ತಿವೆ” ಎಂದು ಸರ್ಕಾರ ಹೇಳಿದೆ. ಆದರೆ, ಕಾರ್ಮಿಕ ಒಕ್ಕೂಟದ ಪ್ರಕಾರ 2016ರಿಂದ ಬಸ್ ದರವನನ್ನು ಏರಿಕೆ ಮಾಡಿಲ್ಲ, ಈಗ ಪೆಟ್ರೋಲ್, ಡೀಸೆಲ್ ದರ ದಿಢೀರ್ ಏರಿಕೆ ಕಂಡಿದೆ ಎಂದು ಹೇಳಿವೆ.

Comments are closed.