ಕರಾವಳಿ

ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ದೀಪಾವಳಿ ಹಾಗೂ ರಾಜ್ಯೋತ್ಸವ ಸಂಭ್ರಮ

Pinterest LinkedIn Tumblr

ರಾಷ್ಟ್ರೀಯ ಹಬ್ಬಗಳಿಂದ ಭಾವೈಕ್ಯ ಸಾಧನೆ : ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ಹಬ್ಬಗಳಿರುವುದು ನಾವು ಸಂಭ್ರಮಿಸುವುದಕ್ಕೆ. ಹ ಬ್ಬಗಳನ್ನು ಆಚರಿಸುವುದರಿಂದ ಸಮಾಜದ ತಾರತಮ್ಯ ನಿವಾರಣೆ ಸಾಧ್ಯ. ಅದರಲ್ಲೂ ರಾಷ್ಟ್ರೀಯ ಹಬ್ಬಗಳ ಸಾಮೂಹಿಕ ಆಚರಣೆಯಿಂದ ದೇಶ ಬಾಂಧವರಲ್ಲಿ ಭಾವೈಕ್ಯ ಬಲಗೊಳ್ಳುತ್ತದೆ’ ಎಂದು ಲೇಖಕ-ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ನಗರದ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿನ , ದೀಪಾವಳಿ ಮತ್ತು ರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಬ್ಬದ ಸಂದೇಶ ನೀಡಿ ಮಾತನಾಡಿದ ಅವರು ‘ದೀಪಾವಳಿಯ ಪರ್ವಕಾಲದಲ್ಲಿ ಜ್ಞಾನದ ಬೆಳಕನ್ನು ಹಚ್ಚಿ ನಾವೆಲ್ಲ ಸೌಹಾರ್ದದ ಬದುಕನ್ನು ಬಾಳುವ ಸಂಕಲ್ಪ ಮಾಡೋಣ ‘ ಎಂದರು.

‘ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರವನ್ನು ಇತಿಹಾಸವೆಂದೂ ಮರೆಯದು. ಅವರ ಹುಟ್ಟುಹಬ್ಬ ರಾಷ್ಟ್ರೀಯ ಏಕತಾದಿನವಾಗಿ ಆಚರಿಸಲ್ಪಡುವುದು ಮುಂದಿನ ಜನಾಂಗಕ್ಕೆ ಆದರ್ಶ. ಹಾಗೆಯೇ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಕನ್ನಡಿಗರೆಲ್ಲರ ಕರ್ತವ್ಯ’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲೆ ಸಿ.ಮೆಲಿಸ್ಸ ಮಾತನಾಡಿ ‘ಮಕ್ಕಳಿಗೆ ನಾಡು-ನುಡಿ ಸಂಸ್ಕೃತಿಯ ಪರಿಚಯ ಮಾಡುವುದರೊಂದಿಗೆ ಸಮುದಾಯಗಳನ್ನು ಬೆಸೆಯುವ ಉದ್ದೇಶದಿಂದ ಶಾಲೆಯಲ್ಲಿ ಹಬ್ಬಗಳ ಸಂಭ್ರಮವನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದರು.

ಸಂಸ್ಥೆಯಲ್ಲಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯ್ತು. ಬಳಿಕ ಶಾಲಾ ವಿದ್ಯಾರ್ಥಿ ಗಳಿಂದ ದೀಪಾವಳಿ ಆಚರಣೆ, ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Comments are closed.