ರಾಷ್ಟ್ರೀಯ

ಪಿಎಂಸಿ ಬ್ಯಾಂಕ್ ಹಗರಣದ ಕರ್ಮಕಾಂಡದ ಒಂದು ಕಥೆ

Pinterest LinkedIn Tumblr


ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಅಥವಾ ಪಿಎಂಸಿ ಬ್ಯಾಂಕ್ ಈಗ್ಗೆ ಕೆಲವಾರು ದಿನಗಳಿಂದ ಜೋರು ಸದ್ದು ಮಾಡುತ್ತಿದೆ. ಆ ಸಹಕಾರಿ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಇಬ್ಬರು ವ್ಯಕ್ತಿಗಳು ನಿಧನರಾಗಿರುವ ಶಾಕಿಂಗ್ ನ್ಯೂಸ್ ಕೂಡ ಕೇಳಿಬಂದಿದೆ. ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಹಲವು ಹಗರಣಗಳ ಪಟ್ಟಿಗೆ ಪಿಎಂಸಿಯೂ ಸೇರ್ಪಡೆಯಾಗಿದೆ. 6 ಸಾವಿರ ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ. ಪಿಎಂಸಿ ಬ್ಯಾಂಕ್​ನ ಕೋಟ್ಯಂತರ ಹಣವನ್ನು ಸಂಚು ರೂಪಿಸಿ ಲಪಟಾಯಿಸಿದ ಹೆಚ್​ಡಿಐಎಲ್ ಬ್ಯಾಂಕ್​ನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್​​ಡಿಐಎಲ್ ಕಂಪನಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ನಡೆದಿದೆ.

ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್​ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್​ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ. ಪಿಎಂಸಿ ಬ್ಯಾಂಕ್ ಹಾಗೂ ಅದರ ಸುತ್ತಲಿನ ವಿವಾದದ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:

ನಂಬರ್ ಒನ್ ಸಹಕಾರಿ ಬ್ಯಾಂಕ್:

ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 1984ರ ಫೆ. 13ರಂದು ಪ್ರಾರಂಭವಾದಾಗ ಒಂದೇ ಬ್ರ್ಯಾಂಚ್ ಇದ್ದದ್ದು. 35 ವರ್ಷಗಳಲ್ಲಿ ಅದು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ 137 ಬ್ರ್ಯಾಂಚ್​ಗಳನ್ನ ಸ್ಥಾಪಿಸುವ ಮಟ್ಟಕ್ಕೆ ಬೆಳೆದಿದೆ. 1,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬರೋಬ್ಬರಿ 11 ಸಾವಿರ ಕೋಟಿ ರೂ ಠೇವಣಿಗಳನ್ನ ಗ್ರಾಹಕರಿಂದ ಶೇಖರಿಸಿದೆ. ಭಾರತದ ಸಹಕಾರಿ ಬ್ಯಾಂಕುಗಳಲ್ಲೇ ಪಿಎಂಸಿ ನಂಬರ್ ಒನ್ ಎನಿಸಿದೆ. 19 ವರ್ಷಗಳ ಹಿಂದ ಆರ್​ಬಿಐ ಈ ಸಹಕಾರಿ ಬ್ಯಾಂಕನ್ನ ಶೆಡ್ಯೂಲ್ಡ್ ಕಮರ್ಷಿಯಲ್ ಪಟ್ಟಿಗೆ ಸೇರ್ಪಡೆ ಮಾಡಿತು.

ಹಗರಣ ಬೆಳಕಿಗೆ ತಂದ ನಾರಿಮಣಿಯರು:

ಪಿಎಂಸಿ ಬ್ಯಾಂಕ್​ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಅದೇನೋ ಅನುಮಾನ ಬಂದಿದೆ. ಲೋನ್ ಅಕೌಂಟ್ ಹೆಸರಲ್ಲಿ ಗುಪ್ತ ಖಾತೆಗಳಿವೆ. ಇತ್ತ ಗಮನ ಹರಿಸಿ ಎಂದು ಈ ಮಹಿಳೆಯರು ಆರ್​ಬಿಐಗೆ ತಿಳಿಸಿದ್ದಾರೆ. ಆಗ ಘೋಸ್ಟ್ ಅಕೌಂಟ್​ಗಳ ಕರ್ಮಕಾಂಡ ಮತ್ತು ಸಾವಿರಾರು ಕೋಟಿ ರೂ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದವು.

ರಹಸ್ಯ ಖಾತೆಗಳ ರಹಸ್ಯ:

ರಹಸ್ಯ ಖಾತೆಗಳ ವಿಚಾರ ಹೊರಬರುತ್ತಲೇ ಕಂಗಾಲಾದ ಪಿಎಂಸಿ ಗ್ರಾಹಕರು ತಮ್ಮ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಮುಗಿಬಿದ್ದರು. ಆಗ ಹಣ ಹಿಂಪಡೆಯುವ ಪ್ರಮಾಣವನ್ನು 1 ಸಾವಿರಕ್ಕೆ ಮಿತಿಗೊಳಿಸಿದಾಗ ಗ್ರಾಹಕರು ಕಂಗಾಲಾದರು. ಈಗ ನಿರ್ಮಲಾ ಸೀತಾರಾಮನ್ ಮಧ್ಯಪ್ರವೇಶದಿಂದ ಹಣ ಹಿಂಪಡೆಯುವ ಮಿತಿ 40 ಸಾವಿರಕ್ಕೆ ಏರಿದೆ.

ಆದರೆ, ಹಗರಣದ ಮೂಲವಾಗಿರುವುದು ಹೆಚ್​ಡಿಐಎಲ್ (ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಲಿ) ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು. ಪಿಎಂಸಿ ಬ್ಯಾಂಕ್​ನ ಕೆಲ ಉನ್ನತ ಅಧಿಕಾರಿಗಳೊಂದಿಗೆ ಸೇರಿ ಸಾವಿರಾರು ಕೋಟಿ ಲಪಟಾಯಿಸಿದ್ದಾರೆ. ಅದಕ್ಕಾಗಿ ಬರೋಬ್ಬರಿ 21 ಸಾವಿರಕ್ಕೂ ಹೆಚ್ಚು ಬೋಗಸ್ ಖಾತೆಗಳನ್ನ ಸೃಷ್ಟಿಸಿದ್ದಾರೆ. ಹೆಚ್​ಡಿಐಎಲ್ ಗ್ರೂಪ್ ಸಂಸ್ಥೆಗಳ 44 ಲೋನ್ ಅಕೌಂಟ್​ಗಳನ್ನ ಮುಚ್ಚಿಹಾಕಲು ಈ ರಹಸ್ಯ ಬೋಗಸ್ ಖಾತೆಗಳನ್ನ ಬಳಕೆ ಮಾಡಲಾಗಿದೆ. ಈ ಮೂಲಕ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳ್ಳ ಮಾರ್ಗದಲ್ಲಿ ಬ್ಯಾಂಕ್​ನಿಂದ ವರ್ಗ ಮಾಡಲಾಗಿದೆ. ಹೆಚ್​​ಡಿಐಎಲ್​ನ ವಿವಿಧ ಲೋನ್ ಅಕೌಂಟ್​ಗಳ ಹೆಸರಲ್ಲಿ ಬ್ಯಾಂಕ್​ನ ಓವರ್​ಡ್ರಾಫ್ಟ್ ಸೌಲಭ್ಯ ಬಳಸಿ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲಾಗಿದೆ.

ಹೆಚ್​ಡಿಐಎಲ್​ನ ಲೋನ್ ಅಕೌಂಟ್​ಗಳನ್ನ ಮುಚ್ಚಿಡಲು ಪಿಎಂಸಿ ಬ್ಯಾಂಕ್​ನ ಸಾಫ್ಟ್​ವೇರನ್ನೇ ತಿರುಚಲಾಗಿದೆ. ಆ ಸಂಸ್ಥೆಯ ಪ್ರೊಮೋಟರ್ಸ್​ಗೆ ಈ ರಹಸ್ಯ ಖಾತೆಗಳನ್ನ ಗೋಪ್ಯವಾಗಿ ನಿರ್ವಹಿಸುವ ಅವಕಾಶ ಒದಗಿಸಲಾಗಿದೆ.

ಈಗ ಜಾರಿ ನಿರ್ದೇಶನಾಲಯದವರು ಹೆಚ್​ಡಿಐಎಲ್ ಸಂಸ್ಥೆಯ ವ್ಯವಹಾರವನ್ನೆಲ್ಲಾ ಜಾಲಾಡುತ್ತಿದ್ದಾರೆ. ಅದರ ಒಡೆತನದ ಆಸ್ತಿಗಳನ್ನ ಮುಟ್ಟುಗೋಲು ಮಾಡಿಕೊಳ್ಳುತ್ತಿದ್ಧಾರೆ. ಈವರೆಗೂ ಸಿಕ್ಕಿರುವ ಅದರ ಆಸ್ತಿಯ ಮೌಲ್ಯ 3,500 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಹೆಚ್​​ಡಿಐಎಲ್​ನ ಮುಖ್ಯಸ್ಥ ರಾಕೇಶ್ ವಾಧವಾನ್ ಮತ್ತವರ ಮಗ ಸಾರಂಗ್ ವಾಧವಾನ್ ಅವರನ್ನು ಮುಂಬಯ ಪೊಲೀಸರು ಬಂಧಿಸಿದ್ದಾರೆ.

Comments are closed.