ರಾಷ್ಟ್ರೀಯ

ಸೇನೆಯ ನಿವೃತ್ತ ಕ್ಯಾಪ್ಟನ್‍ರ ಎಟಿಎಂ ಹಣ ದೋಚಿದ ಕಳ್ಳಿಯರು

Pinterest LinkedIn Tumblr


ನವದೆಹಲಿ: ಸೇನೆಯ ನಿವೃತ್ತ ಕ್ಯಾಪ್ಟನ್ ಅವರನ್ನೇ ಕಳ್ಳಿಯರು ದೋಚಿರುವ ಪ್ರಕರಣ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಸೇನೆಯ ನಿವೃತ್ತ ಕ್ಯಾಪ್ಟನ್ ಎನ್.ಕೆ.ಮಹಾಜನ್ ಎಟಿಎಂನಿಂದ ಹಣವನ್ನು ತೆಗೆಯುತ್ತಿದ್ದಾಗ ಕೃತ್ಯ ನಡೆದಿದೆ. ನಾನು ಎಟಿಎಂಗೆ ಹೋಗುವುದನ್ನು ಕಂಡು ನನ್ನನ್ನು ಹಿಂಬಾಲಿಸಿ ಬಂದರು. ನಾನು ಮಹಿಳೆಯರು ಎಂದುಕೊಂಡು ಸುಮ್ಮನಾದೆ. ಆದರೆ ನನ್ನ ಪ್ಯಾಂಟ್‍ನಲ್ಲಿದ್ದ 40 ಸಾವಿರ ರೂ. ಕದ್ದು ಪರಾರಿಯಾದರು ಎಂದು ತಿಳಿಸಿದ್ದಾರೆ.

ಎಟಿಎಂನಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ. ಇಬ್ಬರು ಮಹಿಳೆಯರು ಬಂದು ನನ್ನ ಬಳಿ ಇದ್ದ ಹಣ ಹೊತ್ತೊಯ್ದರು. ನಾನು ನಿಲ್ಲುವಂತೆ ಹೇಳಿದರೂ ಅವರು ನಿಲ್ಲಲಿಲ್ಲ ಎಂದು ದೂರಿದ್ದಾರೆ. ಮಹಾಜನ್ ಅವರು 1971ರ ಯುದ್ಧದಲ್ಲಿ ಹೋರಾಡಿದವರಾಗಿದ್ದಾರೆ.

ಎಟಿಎಂ ಬಳಿ ಇದ್ದವರು ಮಹಿಳೆಯರಾದ್ದರಿಂದ ಏನು ಮಾಡುವುದಿಲ್ಲ ಎಂದುಕೊಂಡು ಧೈರ್ಯದಿಂದ ನಾನು ನನ್ನ ಎಟಿಎಂ ವಹಿವಾಟನ್ನು ಮುಂದುವರಿಸಿದೆ. ಎಟಿಎಂನಲ್ಲಿ ಹಣವಿಲ್ಲ ಎಂದು ಮಾತನಾಡಿಸುತ್ತ ಕಳ್ಳಿಯರು ನನ್ನ ಬಳಿ ಬಂದರು ಎಂದು ಮಹಾಜನ್ ವಿವರಿಸಿದ್ದಾರೆ.

ನಂತರ ಇಬ್ಬರೂ ಮಹಿಳೆಯರು ಒಳಗೆ ಆಗಮಿಸಿ ಯಂತ್ರದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ನನ್ನನ್ನು ಕೇಳಿದರು. ಈ ರೀತಿ ಮಾತನಾಡುತ್ತಿರುವಾಗಲೇ ಮಹಿಳೆಯರು ನನ್ನ ಪ್ಯಾಂಟ್ ಜೇಬಿನಲ್ಲಿದ್ದ 40 ಸಾವಿರ ರೂ.ಗಳನ್ನು ಎತ್ತಿಕೊಂಡರು. ಅದು ನಾನು ಬ್ಯಾಂಕ್‍ನಿಂದ ಬಿಡಿಸಿಕೊಂಡು ಬಂದಿದ್ದ ಹಣವಾಗಿತ್ತು ಎಂದು ಮಹಾಜನ್ ಅವರು ತಿಳಿಸಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments are closed.