
ನವದೆಹಲಿ: ಭಾರತದ ವಿರುದ್ಧ ಜಿಹಾದ್ ಗೆ ಬಹಿರಂಗವಾಗಿ ಕರೆಕೊಟ್ಟಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡೆಯನ್ನು ಕಟುವಾಗಿ ಟೀಕಿಸಿರುವ ಭಾರತದ ವಿದೇಶಾಂತ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಇದೊಂದು ಗಂಭೀರವಾದ ವಿಷಯವೇ ಹೊರತು ಸಾಮಾನ್ಯವಾದದ್ದಲ್ಲ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಪಾಕ್ ಆಕ್ರಮಿತ ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆವರೆಗಿನ ಪ್ರಾಯೋಜಿತ ರಾಲಿ ಪ್ರಚೋದನಕಾರಿ ಮತ್ತು ಬೇಜವಾಬ್ದಾರಿತನದ ಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವೀಶ್, ಪಾಕಿಸ್ತಾನದ ನಡವಳಿಕೆ ಪ್ರಚೋದನಾಕಾರಿ ಮತ್ತು ಅತೀರೇಕದ್ದಾಗಿದೆ. ಇದನ್ನು ನಾವು ಖಂಡಿಸಬೇಕು. ಅಂತಾರಾಷ್ಟ್ರೀಯ ಸಂಬಂಧವನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದು ಪಾಕಿಸ್ತಾನಕ್ಕೆ ತಿಳಿದಿಲ್ಲ. ಇಮ್ರಾನ್ ನಡವಳಿಕೆ ತುಂಬಾ ಗಂಭೀರವಾದದ್ದು ಎಂದು ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರದಿಂದ ಗಡಿನಿಯಂತ್ರಣ ರೇಖೆವರೆಗೆ ಪಾಕ್ ಸೇನೆ ಪ್ರಾಯೋಜಿತ ರಾಲಿಯನ್ನು ನಡೆಸಲು ಶುಕ್ರವಾರ ಸಿದ್ದತೆ ನಡೆಸಿಕೊಂಡಿದ್ದು, ಅದನ್ನು ತಡೆಯಲು ಭಾರತ ಪೂರ್ಣ ಪ್ರಮಾಣದಲ್ಲಿ ತಯಾರಾಗಿರುವುದಾಗಿ ಭಾರತೀಯ ಸೇನಾಪಡೆ ಗುರುವಾರ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
Comments are closed.