ಕರ್ನಾಟಕ

ಆ್ಯಪ್ ಮುಖಾಂತರ ಯುವಕರ ಗೆಳೆತನ ಬೆಳೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಸಲಿಂಗಕಾಮಿಯ ಬಂಧನ

Pinterest LinkedIn Tumblr


ಬೆಂಗಳೂರು: ಆ್ಯಪ್ ಮೂಲಕ ಯುವಕರ ಸ್ನೇಹ ಬೆಳೆಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಸಲಿಂಗಕಾಮಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಸಂದೀಪ್ ಜಾದವ್ (29) ಅಲಿಯಾಸ್ ಲೇಟ್ ಶಂಕರ್ ಜಾದವ್ ಬಂಧಿತ ಆರೋಪಿ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಸಂದೀಪ್ ಜಾದವ್‍ನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಹೈದರಾಬಾದ್ ಮೂಲದ ಮಧುಕಿರಣ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.

ಸಂದೀಪ್ ಜಾದವ್ ಹಾಗೂ ಮಧುಕಿರಣ್ ಪ್ಯಾನೆಟ್ ರೋಮಿಯೋ ಆ್ಯಪ್ ಮೂಲಕ ಯುವಕರನ್ನು ಸಲಿಂಗಕಾಮಕ್ಕೆ ಉತ್ತೇಜಿಸುತ್ತಿದ್ದರು. ಇದೇ ರೀತಿ ಬೆಂಗಳೂರಿನ ಸಿಕೆ ಅಚ್ಚುಕಟ್ಟು ನಿವಾಸಿ ಯುವಕನನ್ನು ಪರಿಚಯ ಮಾಡಿಕೊಂಡು, ಸಲಿಂಗಕಾಮದ ಹಂತಕ್ಕೆ ತಂದು ನಿಲ್ಲಿಸಿದ್ದರು. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಸಂದೀಪ್ ಜಾದವ್ ಯುವಕನ ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಗೆ ಬಂದಿದ್ದ. ಬಳಿಕ ರೂಮ್ ಬಾಗಿಲು ಹಾಕಿ ಯುವಕನೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದ. ಇಬ್ಬರು ಪರಸ್ಪರ ವಿಡಿಯೋ ಹಾಗೂ ಫೋಟೋಸ್ ತಗೊಂಡಿದ್ದಾರೆ. ಅದೇ ದಿನವೇ ಯುವಕನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದ್ದವು ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.

ಈ ಸಂಬಂಧ ಸಂತ್ರಸ್ತ ಯುವಕ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರಿನ ಜೊತೆಗೆ ಸಂದೀಪ್ ಜಾದವ್ ಫೋಟೋವನ್ನು ಪಡೆದಿದ್ದ ಪೊಲೀಸ್ ಸಿಬ್ಬಂದಿ, ಆರೋಪಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದರು. ಸಂದೀಪ್ ಜಾದವ್ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮಧುಕಿರಣ್ ಕೃತ್ಯ ಬೆಳಕಿಗೆ ಬಂದಿದೆ ಎಂದು ರೋಹಿಣಿ ಕಟೋಚ್ ಹೇಳಿದರು.

ತಾನು ಯುವಕನ ಜೊತೆಗೆ ರೂಮ್‍ನಲ್ಲಿ ಸೆಕ್ಸ್ ಮಾಡುತ್ತಿದ್ದಾಗ ಮಧುಕಿರಣ್ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಸಂದೀಪ್ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಆರೋಪಿಗಳು ಬೇರೆ ಬೇರೆ ಕಡೆ ಇದೇ ರೀತಿ ಕೃತ್ಯ ಎಸಗಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದ್ದು, ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದರು.

Comments are closed.