ರಾಷ್ಟ್ರೀಯ

ಅ.2ರ ನಂತರ ಪ್ಲಾಸ್ಟಿಕ್ ನಿಷೇಧ: ಪಾರ್ಸೆಲ್‌ ಊಟವೂ ದುಬಾರಿ!

Pinterest LinkedIn Tumblr


ಹೊಸದಿಲ್ಲಿ: ಅ.2ರ ನಂತರ ಇನ್ನು ಪಾರ್ಸೆಲ್‌ ಊಟ ತರಿಸಬೇಕಾದರೆ ದುಪ್ಪಟ್ಟು ದರ ಪಾವತಿಸಬೇಕಾಗಬಹುದು. ಅಥವಾ ಆಹಾರಕ್ಕಿಂತಲೂ ಪಾರ್ಸೆಲ್‌ಗೆ ಹೆಚ್ಚಿನ ದರ ಇರಬಹುದು. ಇದಕ್ಕೆ ಕಾರಣ ಏನೆಂದರೆ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ. ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್‌ ವಿರುದ್ಧ ಸಂಪೂರ್ಣ ನಿಷೇಧ ಜಾರಿಗೊಳ್ಳಲಿದ್ದು, ಇದರಿಂದ ಇನ್ನು ಪಾರ್ಸೆಲ್‌ ಆಹಾರ ದುಬಾರಿಯಾಗಲಿದೆ.

ಅಷ್ಟೇ ಅಲ್ಲ ತಾತ್ಕಾಲಿಕವಾಗಿ ಆಹಾರ ಡೆಲಿವರಿ ನೀಡುವ ಕಂಪೆನಿಗಳು ಪಾರ್ಸೆಲ್‌ ನೀಡಿಕೆಯನ್ನು ಸ್ಥಗಿತಗೊಳಿಸಬಹುದು. ಅರ್ಥಾತ್‌ ಸ್ವಿಗ್ಗಿ, ಝೊಮೆಟೋ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ಇದಕ್ಕಾಗಿ ಪರ್ಯಾಯ ಕ್ರಮದತ್ತ ಚಿಂತಿಸಲಾಗುತ್ತಿದೆ. ಏಕಬಳಕೆಯ ಪ್ಲಾಸ್ಟಿಕ್‌ ಬದಲು ಕಡಿಮೆ ದರದಲ್ಲಿ ಯಾವುದರಲ್ಲಿ ಆಹಾರ ಸಾಗಿಸಬಹುದು ಎಂದು ಕಂಪೆನಿಗಳು ಆಲೋಚಿಸುತ್ತಿವೆ.

ನಿಷೇಧದಿಂದಾಗಿ ಪ್ಲಾಸ್ಟಿಕ್‌ ಚೀಲ, ಕಪ್‌, ಸ್ಟ್ರಾಗಳ ಬಳಕೆ, ಮಾರಾಟ ನಿಷೇಧವಾಗಲಿದೆ. 18 ರಾಜ್ಯಗಳಲ್ಲಿ ಈಗಾಗಲೇ ಇಂತಹ ವಸ್ತುಗಳಿಗೆ ನಿಷೇಧವಿದೆ. ಆದರೂ ಅಲ್ಲಿ ಬಳಕೆ ಇದೆ. ಆದರೆ, ಕೇಂದ್ರ ಕ್ರಮದ ಬಳಿಕ ಕಾನೂನು ಕುಣಿಕೆ ಬಿಗಿಯಾಗಬಹುದು. ಆದ್ದರಿಂದ ಸ್ವಲ್ಪ ಸಮಯದ ಮೇಲೆ ಪ್ಲಾಸ್ಟಿಕ್‌ ಪೂರೈಕೆಯೇ ನಿಲ್ಲುವ ಸಾಧ್ಯತೆ ಇದೆ.

ಖರ್ಚು ದುಪ್ಪಟ್ಟು
ಈಗಿರುವ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್‌ ಹೊರತಾದ ಆಹಾರ ಪಾರ್ಸೆಲ್‌ಗೆ ಖರ್ಚು ಮೂರುಪಟ್ಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರೆಸ್ಟೋರೆಂಟ್‌ಗಳು ಪಾರ್ಸೆಲ್‌ಗೆ ಹೆಚ್ಚುವರಿ ದರವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ. ಆದ್ದರಿಂದ ಸದ್ಯ ಪಾರ್ಸೆಲ್‌ನಲ್ಲಿ ನೀಡುವುದನ್ನು ಅವುಗಳು ಬಂದ್‌ ಮಾಡುವ ಸಾಧ್ಯತೆ ಇದೆ. ಗ್ರಾಹಕರೇ ಪಾತ್ರೆಗಳನ್ನು ತೆಗೆದುಕೊಂಡು ಹೋದರೆ ಮಾತ್ರ ಅವುಗಳು ಪಾರ್ಸೆಲ್‌ ಕೊಡುವ ಸಾಧ್ಯತೆ ಇದೆ.

ಪರ್ಯಾಯವೇನು?
ಸದ್ಯ ಕಂಪೆನಿಗಳು ಆಹಾರವನ್ನು ಬಿದಿರಿನಿಂದ ಮಾಡಿದ ವಸ್ತುಗಳು, ಪೇಪರ್‌, ಗಾಜಿನ ಪಾತ್ರೆ, ಹಾಳೆ ಪಾತ್ರೆ ಇತ್ಯಾದಿಗಳನ್ನು ಪೂರೈಸಬಹುದು. ಆದರೆ ಇದು ವೆಚ್ಚದಾಯಕ. ಜೈವಿಕ ಪ್ಲಾಸ್ಟಿಕ್‌ ಕೂಡ ದುಬಾರಿ.

ಪ್ಲಾಸಿಕ್‌ ಆದಾಯಕ್ಕೆ ಬರೆ
ದೇಶಾದ್ಯಂತ ಪ್ಲಾಸ್ಟಿಕ್‌ ತಯಾರಿಕೆಯಿಂದ ವಾರ್ಷಿಕ 3.5 ಕೋಟಿ ರೂ. ಆದಾಯವಿದೆ. 2017-18ರಲ್ಲಿ ದಿನಕ್ಕೆ 26 ಸಾವಿರ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆಯಾಗಿತ್ತು. ಇವುಗಳಲ್ಲಿ ಶೇ.60ರಷ್ಟನ್ನು ಮರುಬಳಕೆ ಮಾಡಲಾಗಿತ್ತು.

Comments are closed.