ರಾಷ್ಟ್ರೀಯ

ಹಾಲಿವುಡ್ ಸಿನಿಮಾಗಳಿಂದ ಪ್ರಭಾವಿತನಾಗಿ ಬ್ಯಾಂಕ್​ ದರೋಡೆಗೆ ಯತ್ನಿಸಿ ಜೈಲು ಸೇರಿದ!

Pinterest LinkedIn Tumblr


ನವದೆಹಲಿ: ಯೂಟ್ಯೂಬ್​ನಲ್ಲಿ ಹಾಲಿವುಡ್​ ಸಿನಿಮಾ ನೋಡಿ ಪ್ರಭಾವಿತನಾದ 31 ವರ್ಷದ ವ್ಯಕ್ತಿಯೊಬ್ಬ ಮೂರು ವಿವಿಧ ಬ್ಯಾಂಕ್​ಗಳಲ್ಲಿ ದರೋಡೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಖಂಡದ ಪೌರಿ ಗರ್ವಾಲಾ ಜಿಲ್ಲೆಯ ಕೊಟ್ದ್ವಾರ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಆರೋಪಿಯನ್ನು ವಿಕಲ್​ ರಾಥಿ ಎಂದು ಗುರುತಿಸಲಾಗಿದ್ದು, ಈತ ಉತ್ತರ ಪ್ರದೇಶದ ಬಿಜ್ನೋರ್​ ಜಿಲ್ಲೆಯ ನಿವಾಸಿಯಾಗಿದ್ದಾನೆ. ಕೊಟ್ದ್ವಾರ ಪಟ್ಟಣದ ಕೋ ಆಪರೇಟಿವ್​ ಬ್ಯಾಂಕ್​ ದರೋಡೆ ಪ್ರಯತ್ನದ ಪ್ರಕರಣದ ತನಿಖೆ ನಡೆಸುವಾಗ ಆರೋಪಿಯನ್ನು ಬಂಧಿಸಲಾಗಿದೆ. ಸೆ.15 ಮತ್ತು 16ರ ರಾತ್ರಿ ದರೋಡೆ ಯತ್ನ ನಡೆದಿತ್ತು.

ಪ್ರಕರಣದ ತನಿಖೆ ವೇಳೆ ಸಿಸಿಟಿವಿ ಫುಟೇಜ್​ ಅನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ದೊರಕಿತ್ತು. ಬ್ಯಾಂಕ್​ನ ಮುಖ್ಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಆರೋಪಿ, ಬಳಿಕ ಸ್ಟ್ರಾಂಗ್​ ರೂಮ್​ ತೆರೆಯಲು ವಿಫಲನಾಗಿದ್ದಾನೆ. ಬೆಳಗ್ಗೆ ಆಗುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಆರೋಪಿ, ಬ್ಯಾಂಕಿನ ಒಳಗಿದ್ದ ಭದ್ರತಾ ಸಿಬ್ಬಂದಿಯ ಎರಡು ರೈಫಲ್​ ಅನ್ನು ಕದ್ದುಕೊಂಡು ಪರಾರಿಯಾಗಿದ್ದ ಎಂದು ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ದಿಲೀಪ್​ ಸಿಂಗ್​ ಕುನ್ವಾರ್​ ತಿಳಿಸಿದ್ದಾರೆ.

ಆರೋಪಿಯು ನಾಜಿಬಬಾದ್​ ಪ್ರದೇಶದಲ್ಲಿ ಇರುವ ಮಾಹಿತಿಯನ್ನು ಪಡೆದ ಪೊಲೀಸರು ಆತನನ್ನು ಸುತ್ತವರಿದು ಬಂಧಿಸಿದ್ದಾರೆ. ಆರೋಪಿಯ ಬಳಿ ಕಳುವಾಗಿದ್ದ ಎರಡು ರೈಫಲ್​ ಹಾಗು ಅಪರಾಧ ಚಟುವಟಿಕೆ ಬಳಸಲಾಗುತ್ತಿದ್ದ ಬೈಕ್​ನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ಬಿಜ್ನೋರ್​​ದಲ್ಲಿರುವ ಇನ್ನೆರಡು ಬ್ಯಾಂಕ್​ಗಳಲ್ಲಿ ದರೋಡೆ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಯೂಟ್ಯೂಬ್​ನಲ್ಲಿ ಹಾಲಿವುಡ್​ ಸಿನಿಮಾ ನೋಡಿ ಪ್ರಭಾವಿತನಾಗಿ ಕೃತ್ಯ ಎಸಗಿದ್ದಾಗಿ ಕುನ್ವಾರ್​ ಮಾಹಿತಿ ನೀಡಿದ್ದಾರೆ.

ಆರೋಪಿ ಉತ್ತಮ ಕುಟುಂಬದ ಹಿನ್ನೆಲೆವುಳ್ಳನೆಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ತಮ್ಮ ಗ್ರಾಮದಲ್ಲಿ 20 ಎಕರೆ ಕೃಷಿ ಭೂಮಿ ಹಾಗೂ ಒಂದು ಕಲ್ಯಾಣ ಮಂಟಪವನ್ನು ಹೊಂದಿದ್ದಾನೆ. ತಂದೆ ತಾಯಿಗೆ ಈತ ಒಬ್ಬನೇ ಮಗನಾಗಿದ್ದಾನೆ.

ಖಾಸಗಿ ಬ್ಯಾಂಕ್​ನಲ್ಲಿ ತೆಗೆದುಕೊಂಡಿದ್ದ 20 ಲಕ್ಷ ರೂ. ಸಾಲವನ್ನು ತೀರಿಸಲು ದರೋಡೆ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. ಇದನ್ನು ಹೊರತುಪಡಿಸಿ ಸಿನಿಮಾ ನಂತರದ ಥ್ರಿಲ್​ಗೋಸ್ಕರ ದರೋಡೆಗೆ ಯತ್ನಿಸಿದ್ದಾಗಿಯೂ ಒಪ್ಪಿಕೊಂಡಿದ್ದಾನೆ. ಭಾರತೀಯ ದಂಡ ಸಂಹಿತೆಯ ಸೂಕ್ತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ.

Comments are closed.