ರಾಷ್ಟ್ರೀಯ

ಸಮುದ್ರದ ನೀರಿನ ಮಟ್ಟ ಭಾರೀ ಹೆಚ್ಚಳ: ದೇಶದ 4 ನಗರಗಳಿಗೆ ಮುಳುಗಡೆ ಭೀತಿ?

Pinterest LinkedIn Tumblr


ನವದೆಹಲಿ: ಹಿಮಾಲಯದ ಗ್ಲೇಸಿಯರ್ ನಲ್ಲಿರುವ ನಿರ್ಗಲ್ಲುಗಳು ಕರಗುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ಭಾರತದ ನಾಲ್ಕು ಪ್ರಮುಖ ಕರಾವಳಿ ರಾಜ್ಯಗಳ ಸಮುದ್ರದ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮುಳುಗಡೆಯ ಭೀತಿ ಎದುರಾಗಲಿದೆ ಎಂದು ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಂಡಳಿ ಎಚ್ಚರಿಕೆ ನೀಡಿದೆ.

ಯಾವುದು ಆ ಪ್ರಮುಖ ನಗರಗಳು?

ಭಾರತದ ಪ್ರಮುಖ ಕರಾವಳಿ ನಗರಗಳಾದ ಕೋಲ್ಕತಾ, ಮುಂಬೈ, ಸೂರತ್ ಹಾಗೂ ಚೆನ್ನೈನ ಕರಾವಳಿಯ ಸಮುದ್ರದ ಮಟ್ಟ ಏರಿಕೆಯಾಗಿದ್ದು, ಇದು ಭಾರೀ ಅಪಾಯವನ್ನು ತಂದೊಡ್ಡಲಿದೆ ಎಂದು ವರದಿ ತಿಳಿಸಿದೆ.

ಸಮುದ್ರದ ನೀರಿನ ಮಟ್ಟ ಈ ಹಿಂದೆಂದಿಗಿಂತಲೂ ವೇಗವಾಗಿ ಏರಿಕೆಯಾಗುತ್ತಿದೆ. ಹಿಮಾಲಯದ ಹಿಮ ಮತ್ತು ನಿರ್ಗಲ್ಲುಗಳು ಕರಗುವ ಮೂಲಕ ಒಂದು ಮೀಟರ್ ನಷ್ಟು ನೀರಿನ ಮಟ್ಟ ಏರಿಕೆಯಾಗಲಿದ್ದು, 2100ರ ಹೊತ್ತಿಗೆ ಅದರ ಪ್ರಮಾಣ ತೀವ್ರವಾಗಲಿದೆ. ಇದರಿಂದ ಜಾಗತಿಕವಾಗಿ 1.4 ಬಿಲಿಯನಷ್ಟು ಜನ ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶೇಷ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತದ ನಾಲ್ಕು ಪ್ರಮುಖ ರಾಜ್ಯಗಳ 45 ಕರಾವಳಿ ಬಂದರು ನಗರಗಳಲ್ಲಿನ ಸಮುದ್ರದ ಮಟ್ಟ 50ಸೆಂಟಿ ಮೀಟರ್ ನಷ್ಟು ಏರಿಕೆಯಾಗುವ ಮೂಲಕ ಪ್ರವಾಹದಲ್ಲಿ ಮುಳುಗುವ ಅಪಾಯ ಹೆಚ್ಚು. ಇದು ಶತಮಾನಗಳಲ್ಲಿ ಒಂದು ಬಾರಿ ಸಮುದ್ರದ ಮಟ್ಟ ಏರಿಕೆಯಾಗುತ್ತಿರುವ ಪರಿಣಾಮ ಕೆಳಮಟ್ಟದಲ್ಲಿರುವ ಕರಾವಳಿ ನಗರಗಳು ಮತ್ತು ಸಣ್ಣ ದ್ವೀಪಗಳು ಹೆಚ್ಚಿನ ಅಪಾಯ ಎದುರಿಸಲಿದೆ ಎಂದು ಎಚ್ಚರಿಸಿದೆ.

ಅಷ್ಟೇ ಅಲ್ಲ ಜಾಗತಿಕ ತಾಪಮಾನ ವೈಪರೀತ್ಯಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕೆಂದು ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿಯೂ ತಾಪಮಾನ ಏರುವುದರಿಂದ ಸಮುದ್ರ ಜೀವಿಗಳು, ಮೀನು ಸೇರಿದಂತೆ ಜಲಚರಗಳ ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ. ವಾಯುಭಾರ ಕುಸಿತದಿಂದ ಮತ್ಸಕ್ಷಾಮ ಕಾಣಿಸಲಿದೆ ಎಂದು ವರದಿ ತಿಳಿಸಿದೆ.

ಸುಮಾರು 7 ಸಾವಿರ ಸಂಶೋಧನಾ ವರದಿಗಳ ಆಧಾರದ ಮೇಲೆ ವರದಿ ಸಿದ್ದಪಡಿಸಿದ್ದು, ಆ ನಿಟ್ಟಿನಲ್ಲಿ ಹಿಮ ಅತ್ಯಂತ ವೇಗವಾಗಿ ಕರಗುತ್ತಿದ್ದು, ಇದರಿಂದ ಸಮುದ್ರದ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಶತಮಾನದ ಅಂತ್ಯದೊಳಗೆ ಜಾಗತಿಕವಾಗಿ ಸಮುದ್ರದ ನೀರಿನ ಮಟ್ಟ 30ರಿಂದ 60 ಸೆ.ಮೀಟರ್ ನಷ್ಟು ಏರಿಕೆಯಾಗಲಿದೆ ಎಂದು ವಿವರಿಸಿದೆ.

Comments are closed.