ರಾಷ್ಟ್ರೀಯ

ಜಾಧವ್​ಪುರ್ ವಿವಿ ವಿದ್ಯಾರ್ಥಿಗಳಿಂದ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋಗೆ ಗೋ ಬ್ಯಾಕ್​ ಘೋಷಣೆ

Pinterest LinkedIn Tumblr


ಕೋಲ್ಕತ್ತ: ಕೋಲ್ಕತ್ತದ ಜಾಧವ್​ಪುರ ವಿವಿಯ್ಲಿ ಎಬಿವಿಪಿ ಸಂಘಟನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರಿಗೆ ಅಲ್ಲಿನ ಎಡಪಂಥೀಯ ಸಂಘಟನೆಗಳಾದ ಎಎಫ್​ಎಸ್​ಯು ಮತ್ತು ಎಸ್​ಎಫ್​ಐ ಸಂಘಟನೆಯ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ ಸುಪ್ರಿಯೋ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

ವಿವಿ ಆವರಣದೊಳಗೆ ಬಾಬುಲ್​ ಕಾಲಿಡುತ್ತಿದ್ದಂತೆ ವಿದ್ಯಾರ್ಥಿಗಳು ಸಚಿವರಿಗೆ ತಡೆದು, ಒಂದು ತಾಸು ಪ್ರತಿಭಟನೆ ನಡೆಸಿದರು. ಬಳಿಕ ಸಚಿವರು ಪೊಲೀಸರ ಸಹಾಯದಿಂದ ಕಾಲೇಜು ಒಳಹೋದರು.

ಇಂದು ಸಂಜೆ 5 ಗಂಟೆಗೆ ಸಚಿವರು ಕಾಲೇಜು ಕ್ಯಾಂಪಸ್​ನಿಂದ ಹೊರಗೆ ಹೋಗುವ ಹೊತ್ತಿನಲ್ಲೂ ವಿದ್ಯಾರ್ಥಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ತನ್ನ ಕೂದಲು ಎಳೆದು ಹಿಂಸೆ ಮಾಡಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.

ನಾನು ರಾಜಕರಾಣ ಮಾಡುವುದಕ್ಕಾಗಿ ಇಲ್ಲಿಗೆ ಬಂದಿಲ್ಲ. ಆದರೆ, ಅಲ್ಲಿನ ಕೆಲವು ವಿದ್ಯಾರ್ಥಿಗಳ ವರ್ತನೆ ನನಗೆ ಬೇಸರ ಉಂಟು ಮಾಡಿದೆ. ಅವರು ನನ್ನ ಕೂದಲು ಎಳೆದು, ನೂಕಿದ್ದಾರೆ. ವಿದ್ಯಾರ್ಥಿಗಳು ನಾನು ಬಹಿರಂಗವಾಗಿ ನಕ್ಸಲ್​ ಎಂದು ಕರೆಯಲಿ ಎಂಬಂತೆ ಅವರು ನನ್ನನ್ನು ಪ್ರಚೋದಿಸುತ್ತಿದ್ದರು. ಅವರೆಷ್ಟೇ ಪ್ರಯತ್ನಿಸಿದರೂ ನನ್ನನ್ನು ಕೆರಳಿಸಲು ಸಾಧ್ಯವಾಗಲ್ಲ. ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುವಲ್ಲಿ ವಿಪಕ್ಷಗಳ ಪಾತ್ರವಿದೆ. ಅಧಿಕಾರದಲ್ಲಿ ಇರುವ ಪಕ್ಷ ಭಿನ್ನಾಭಿಪ್ರಾಯಗಳನ್ನು ಆಲಿಸುವ ಅಗತ್ಯವೂ ಇದೆ ಎಂದು ಸುಪ್ರಿಯೋ ಅಸಮಾಧಾನ ಹೊರಹಾಕಿದ್ದಾರೆ.

ಕಾಲೇಜಿನ ಪ್ರವೇಶದ್ವಾರದ ಮುಂದೆ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ವಿವಿಯ ಉಪಕುಲಪತಿ ಸುರಂಜನ್​ ದಾಸ್ ಅವರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ ವಿದ್ಯಾರ್ಥಿಗಳು ಗೇಟ್​ ಬಿಟ್ಟು ಕದಲಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮಬಂಗಾಳ ರಾಜ್ಯಪಾಲ ಜಗದೀಪ್​ ಧನ್ಕಾರ್ ಅವರು ಕೇಂದ್ರ ಸಚಿವರಿಗೆ ಘೇರಾವ್ ಹಾಕಿರುವುದು ಗಂಭೀರ ವಿಷಯ. ಈ ವಿಚಾರವಾಗಿ ತುರ್ತು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

Comments are closed.