ರಾಷ್ಟ್ರೀಯ

ಗ್ರಾಮಸ್ಥರಿಂದ ದೇವಸ್ಥಾನದಲ್ಲಿ ಮೋದಿ ಪ್ರತಿಮೆ ಪ್ರತಿಷ್ಠಾಪಿಸಿ, ಪೂಜೆ!

Pinterest LinkedIn Tumblr


ಕತಿಹಾರ್ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಲ್ಲಿ ತುಂಬಾ ಜನ ಮೆಚ್ಚಿಕೊಳ್ಳುತ್ತಾರೆ. ಆದರೆ, ಬಿಹಾರ ಗ್ರಾಮವೊಂದರ ಜನರು ಮೋದಿಯನ್ನು ದೇವರಿಗೆ ಹೋಲಿಸಿ, ಅವರ ಪ್ರತಿಮೆಯನ್ನು ದೇವಸ್ಥಾನದಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಪ್ರತಿಮೆಗೆ ವಿಶೇಷ ಪೂಜೆಯನ್ನು ನೆರವೇರಿಸಿ, ಭಕ್ತಿ ಮೆರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಜನ್ಮ ದಿನದ ಪ್ರಯುಕ್ತ ಬಿಹಾರದ ಕತಿಹಾರ್ ಜಿಲ್ಲೆಯ ಅಜ್ಮಾನಗರ್​ ವಲಯದ ಅನಂದಪುರ್​ ಹಳ್ಳಿಯ ಜನರು ಮೋದಿ ಪ್ರತಿಮೆಯನ್ನು ಗ್ರಾಮದ ಬಜರಂಗ ಬಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಇಡೀ ಊರಿಗೆ ಊರೇ ಇಂದು ಹಬ್ಬದ ವಾತಾವರಣದಲ್ಲಿ ಮಿಂದೆದ್ದು, ಮೋದಿ ಪ್ರತಿಮೆಗೆ ಜನರು ಭಕ್ತ-ಭಾವದಿಂದ ಪೂಜೆ ಸಲ್ಲಿಸುವ ಕ್ಷಣಕ್ಕೆ ಸಾಕ್ಷಿಯಾಗಿದೆ. “ಕೆಲವು ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿರಲಿಲ್ಲ. ಆದರೆ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ವಿದ್ಯುತ್​ ಸೇರಿ ಹಲವು ಮೂಲಭೂತ ಸೌಕರ್ಯಗಳು ಗ್ರಾಮಕ್ಕೆ ಸಿಕ್ಕವು. ಮೋದಿಯನ್ನು ನಾವು ಅಭಿವೃದ್ಧಿ ಆಯಾಮದಲ್ಲಿ ನೋಡುತ್ತೇವೆ,” ಎಂದು ಗ್ರಾಮಸ್ಥರಾದ ಮನೋಜ್​ ಕುಮಾರ್ ಸಾ ಹೇಳುತ್ತಾರೆ. “ನಮ್ಮ ಒಂದೇ ಒಂದು ಆಸೆ ಏನೆಂದರೆ ಅದು ಪ್ರಧಾನಿ ಮೋದಿ ಅವರು ನಮ್ಮ ಗ್ರಾಮಕ್ಕೆ ಬರಬೇಕು ಎಂಬುದು,” ಎಂದು ಮತ್ತೊಬ್ಬ ಗ್ರಾಮಸ್ಥರಾದ ತಾರಕ್​ ಕುಮಾರ್ ಹೇಳುತ್ತಾರೆ.

“ಮೋದಿ ದೇವರಿಗೆ ಸಮ ಎಂದು ನಮ್ಮ ಗ್ರಾಮದ ಜನರು ನಂಬಿದ್ದಾರೆ. ನಮ್ಮ ಒಂದೇ ಒಂದು ಬೇಡಿಕೆ ಏನೆಂದರೆ ಮೋದಿ ನಮ್ಮ ಗ್ರಾಮಕ್ಕೆ ಬಂದು ಭಕ್ತಾದಿಗಳನ್ನು ಭೇಟಿ ಮಾಡಬೇಕು,” ಎಂದು ಮತ್ತೊಬ್ಬ ಗ್ರಾಮಸ್ಥರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Comments are closed.