ಅಂತರಾಷ್ಟ್ರೀಯ

ಪಾಳು ಬಾವಿಯೊಂದರಲ್ಲಿ ತುಂಡು ತುಂಡಾಗಿ ಬಿದ್ದಿದ್ದ 44 ಮೃತ ದೇಹಗಳು!

Pinterest LinkedIn Tumblr


ಮೆಕ್ಸಿಕೋ ದೇಶದಲ್ಲಿ 44 ಜನರನ್ನು ಕೊಂದು ಮೃತ ದೇಹವನ್ನು ಹತ್ತಾರು ತುಂಡುಗಳನ್ನಾಗಿ ಕತ್ತರಿಸಿ 119 ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ತುಂಬಿ ಬಾವಿಯಲ್ಲಿ ಎಸೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಈ ಘಟನೆಗೆ ಇಡೀ ಮೆಕ್ಸಿಕೋ ಬೆಚ್ಚಿ ಬಿದ್ದಿದೆ.

ಮೆಕ್ಸಿಕೋ ದೇಶದ ಉತ್ತರ ಭಾಗದ ಜಾಲಿಸ್ಕೋ ರಾಜ್ಯದಲ್ಲಿ ಮಾದಕ ವಸ್ತಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ. ಇಲ್ಲಿನ ಭೂಗತ ಪಾತಕಿಗಳು ಮಾದಕ ವಸ್ತುಗಳನ್ನು ವಿಶ್ವದಾದ್ಯಂತ ಸಾಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ವ್ಯವಹಾರದಲ್ಲಿನ ಪೈಪೋಟಿಯಿಂದಾಗಿ ಇಲ್ಲಿನ ಪಾತಕಿಗಳ ನಡುವೆ ಆಗಿಂದಾಗ್ಗೆ ಗಲಾಟೆಗಳಾಗುತ್ತಿದ್ದು ಇದರ ಪರಿಣಾಮ ಅಸಂಖ್ಯಾತ ಜನ ಕೊಲೆ ಇಲ್ಲಿ ಸಾಮಾನ್ಯ ಸಂಗತಿಯಂತಾಗಿತ್ತು. ಆದರೆ, ಇದೀಗ ಬೆಳಕಿಗೆ ಬಂದಿರುವ ಘಟನೆ ಎಂತವರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಕೆಲ ದಿನಗಳಿಂದ ಜಾಲಿಸ್ಕೋ ರಾಜ್ಯದ ಗ್ವಾಡಲಜರ ಎಂಬಲ್ಲಿ ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಕೆಟ್ಟ ದುರ್ವಾಸನೆ ಬೀಸುತ್ತಿರುವುದು ತಿಳಿದುಬಂದಿದೆ. ಈ ಕುರಿತು ಸ್ಥಳೀಯ ಜನ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ಪೊಲೀಸರು ಇದೀಗ ಆಘಾತಕಾರಿ ವಿಚಾರವೊಂದನ್ನು ಬಯಲಿಗೆ ಎಳೆದಿದ್ದಾರೆ. ಇಲ್ಲಿನ ಪಾಳು ಬಾವಿಯೊಂದರಲ್ಲಿ 44ಜನರನ್ನು ಕೊಲೆ ಮಾಡಿ ಅವರ ಮೃತದೇಹವನ್ನು ವಿವಿಧ ತುಂಡುಗಳಾಗಿ ಕತ್ತರಿಸಿ ಸುಮಾರು 119 ಪ್ಲಾಸ್ಟಿಕ್ ಬ್ಯಾಗ್​ಗಳಲ್ಲಿ ತುಂಬಿ ಎಸೆದಿರುವುದನ್ನು ಕಂಡು ಸ್ವತಃ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಮೆಕ್ಸಿಕೋ ಇತಿಹಾಸದಲ್ಲೇ ಈ ಪ್ರಮಾಣದ ಭಯಾನಕ ಕೊಲೆಗಳನ್ನು ಇಲ್ಲಿನ ಸರ್ಕಾರ ಕಂಡಿಲ್ಲ. ಈ ಎಲ್ಲಾ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತರ ವಿವರ ಹಾಗೂ ಅವರ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಈ ಸಂಬಂಧ ವಿಚಾರಣೆಯೂ ನಡೆಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

Comments are closed.