ರಾಷ್ಟ್ರೀಯ

ದೇಶದ ಆರ್ಥಿಕತೆ ಕುಸಿಯುತ್ತಿರುವುದು ನಿಜ: ಆರ್​ಬಿಐ ಗವರ್ನರ್

Pinterest LinkedIn Tumblr


ನವದೆಹಲಿ(ಸೆ. 16): ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉತ್ಪನ್ನ ಕುಸಿತ, ಉದ್ಯೋಗ ಕಡಿತ ಇತ್ಯಾದಿ ಶಾಕ್​ಗಳ ಮೇಲೆ ಶಾಕ್​ಗಳು ಬರುತ್ತಿರುವ ಬೆನ್ನಲ್ಲೇ ದೇಶದ ಜಿಡಿಪಿ ಅಭಿವೃದ್ಧಿ ದರ ಶೇ. 5ಕ್ಕೆ ಇಳಿದಿರುವ ಮಾಹಿತಿ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕತೆಗೆ ಹಿನ್ನಡೆಯಾಗುತ್ತಿರುವದನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ, ಜಿಡಿಪಿ ಇಷ್ಟೊಂದು ಮಟ್ಟಕ್ಕೆ ಕುಸಿಯುತ್ತದೆಂದು ನಿರೀಕ್ಷಿಸಿರಲಿಲ್ಲ. ಜಿಡಿಪಿ ದರ ಶೇ. 5ಕ್ಕೆ ಇಳಿದಿರುವುದು ನಿಜಕ್ಕೂ ಅಚ್ಚರಿ ತಂದಿದೆ ಎಂದು ಆರ್​ಬಿಐ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಸಿಎನ್​ಬಿಸಿ-ಟಿವಿ18 ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಜಿಡಿಪಿಯಲ್ಲಿ ಶೇ. 5.8ರಷ್ಟು ಅಭಿವೃದ್ಧಿಯಾಗಬಹುದು ಎಂದು ಆರ್​ಬಿಐ ನಿರೀಕ್ಷಿಸಿತ್ತು. ಈ ದರ ಶೇ. 5.5ಕ್ಕಿಂತ ಕಡಿಮೆ ಇರುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಂತಿಮವಾಗಿ ಶೇ. 5ರಷ್ಟು ಅಭಿವೃದ್ಧಿ ದರ ಬಂದಿರುವುದು ಎಲ್ಲರ ಲೆಕ್ಕಾಚಾರಗಳನ್ನ ತಲೆಕೆಳಗಾಗಿಸಿದೆ ಎಂದು ತಿಳಿಸಿದ್ದಾರೆ.

“ಅಭಿವೃದ್ಧಿ ದರ ಯಾಕಿಷ್ಟು ಕುಸಿದಿದೆ ಎಂಬುದನ್ನು ನಾವು ವಿಶ್ಲೇಷಿಸುತ್ತಿದ್ದೇವೆ” ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆದರೆ, ಆರ್ಥಿಕತೆ ಕುಸಿಯುತ್ತಿರುವ ಸೂಚನೆಯನ್ನು ಆರ್​ಬಿಐ ಈ ಮುಂಚೆಯೇ ಗ್ರಹಿಸಿತ್ತಂತೆ. “ಆರ್ಥಿಕ ಹಿನ್ನಡೆಯಾಗುತ್ತಿರುವ ಸ್ಪಷ್ಟ ಸುಳಿವು ಸಿಕ್ಕಿತ್ತು. ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹಾಗೂ ಬೇಡಿಕೆ ಹೆಚ್ಚಿಸುವ ಸಲುವಾಗಿ ರಿಪೋ ದರದಲ್ಲಿ 25 ಮೂಲಾಂಕದಷ್ಟು ಕಡಿತ ಮಾಡಲು ನಿರ್ಧರಿಸಲಾಯಿತು” ಎಂದು ಆರ್​ಬಿಐ ಗವರ್ನರ್ ಈ ಸಂದರ್ಶನದ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್​ವರೆಗಿನ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ. 5ಕ್ಕೆ ಇಳಿದಿತ್ತು ಎಂದು ಸರಕಾರವೇ ವರದಿ ಮಾಡಿದೆ. ಇದು ಕಳೆದ ಆರು ವರ್ಷದಲ್ಲಿ ಸಾಧಿಸಿದ ಅತೀ ಕಡಿಮೆ ಅಭಿವೃದ್ಧಿ ವೇಗದ ದರವಾಗಿದೆ. ಹಣದುಬ್ಬರ ರಹಿತವಾಗಿ ಜಿಡಿಪಿ ಲೆಕ್ಕ ಹಾಕಿದರೆ ಶೇ. 8ರಷ್ಟು ಮಾತ್ರ ಅಭಿವೃದ್ಧಿಯಾಗಿದೆ. ಇದೂ ಕೂಡ ಕಳೆದ 7 ವರ್ಷದಲ್ಲೇ ಅತೀ ಕಡಿಮೆ ದರವಾಗಿದೆ. ಇನ್ನು, ಅಭಿವೃದ್ಧಿಯ ತಳಹದಿ ಎಂದು ಭಾವಿಸಲಾದ ಅನುಭೋಗ ಅಥವಾ ಕನ್ಸಂಪ್ಷನ್ ವಿಚಾರಕ್ಕೆ ಬಂದರೆ ಅದು ಭಾರೀ ಹಿನ್ನಡೆಯಾಗಿದೆ. ಈ ವಿಚಾರದಲ್ಲಿ ಶೇ. 10.6ರಷ್ಟಿದ್ದ ಅಭಿವೃದ್ಧಿ ದರ ಶೇ. 3.1ಕ್ಕೆ ಕುಸಿದಿತ್ತು. ಇದು ವಿವಿಧ ಕ್ಷೇತ್ರಗಳ ವಿಪರೀತ ಆರ್ಥಿಕ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂಬುದು ಹಲವು ತಜ್ಞರ ವಿಶ್ಲೇಷಣೆಯಾಗಿದೆ.

ಆರ್​ಬಿಐ ಕೂಡ ಸತತ ನಾಲ್ಕು ಬಾರಿ ರಿಪೋ ದರದಲ್ಲಿ ಇಳಿಕೆ ಮಾಡಿತ್ತು. ಕಳೆದ ಬಾರಿ ಮಾಡಿದ ದರ ಇಳಿಕೆಯು ಆರ್​ಬಿಐಗೆ ಅನಿವಾರ್ಯ ಕೂಡ ಆಗಿತ್ತು. ಇದೇ ವೇಳೆ, ಆರ್ಥಿಕತೆಗೆ ಮತ್ತೆ ಚೇತರಿಕೆ ಬರಬೇಕೆಂದರೆ ಖಾಸಗಿ ವಲಯದವರೂ ಒಳಗೊಂಡಂತೆ ಪ್ರತಿಯೊಬ್ಬರೂ ಕೂಡ ಜವಾಬ್ದಾರಿಯುತವಾಗಿರುವುದು ಅಗತ್ಯವಿದೆ ಎಂಬ ಸಲಹೆಯನ್ನು ಶಕ್ತಿಕಾಂತ್ ದಾಸ್ ನೀಡಿದ್ಧಾರೆ.

Comments are closed.