ಕರ್ನಾಟಕ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು. ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಸಾಧ್ಯತೆ ಹೆಚ್ಚಿದೆ. ಮುಖಂಡರು ಮೈಮರೆಯದೇ ಪಕ್ಷ ಸಂಘಟನೆ ಮಾಡಿ. ಮಧ್ಯಂತರ ಚುನಾವಣೆ ಬಂದರೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡೋಣ. ಈ ಬಾರಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಹೇಳುವ ಮೂಲಕ ಕಾಂಗ್ರೆಸ್​ನೊಂದಿಗೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗ ಮುಖಂಡರ ಸಭೆಯಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಪ್ರಸ್ತಾಪ ಮಾಡಿದ ದೇವೇಗೌಡ ಅವರು, ಜನವರಿ-ಫೆಬ್ರವರಿಯಲ್ಲಿ ಚುನಾವಣೆ ಬಂದರೂ ಆಶ್ಚರ್ಯ ಇಲ್ಲ. ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಮಾಡೋದಾದ್ರೆ ಮಾಡಿ. ಈ ತಿಂಗಳು ಆದ ಮೇಲೆ ನಾನು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕುಮಾರಸ್ವಾಮಿ ಕೂಡ ಜಿಲ್ಲೆಗಳ ಪ್ರವಾಸ ಮಾಡುತ್ತಾರೆ ಎಂದು ಪಕ್ಷ ಸಂಘಟನೆಗೆ ಕರೆ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದರೂ ಯಾರು ಬೆಂಬಲ ಕೊಡಲಿಲ್ಲ. ಹೀಗಾಗಿ ನಾವು ಮತ್ತೆ ಆ ತಪ್ಪು ಮಾಡಲ್ಲ. ಏಕಾಂಗಿಯಾಗಿ ಎಲ್ಲಾ ಚುನಾವಣೆ ಎದುರಿಸೋಣ. ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸಿ. ಮಧ್ಯಂತರ ಚುನಾವಣೆ ನಡೆದರೆ ಜೆಡಿಎಸ್​ಗೆ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.

ಯಾರು ಪಕ್ಷ ಬಿಟ್ಟು ಹೋದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ತುಂಬಾ ಜನ ಹೀಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಪಕ್ಷದಲ್ಲಿ ಬೆಳೆದು ಇವತ್ತು ಪಕ್ಷದ ವಿರುದ್ದ ಮಾತಾಡ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ. ನನಗೆ ಪಕ್ಷ ಕಟ್ಟೋದು ಗೊತ್ತು. ಕಾರ್ಯಕರ್ತರು ನನ್ನ ಜೊತೆ ಇದ್ದರೆ ಸಾಕು. ಮತ್ತೆ ಪಕ್ಷವನ್ನು ಅಧಿಕಾರಿಕ್ಕೆ ತರುತ್ತೇನೆ. ಇಂದಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೆ ಸರಿಪಡಿಸಿಕೊಂಡು ಹೋಗಿ ಎಂದು ಸಭೆಯಲ್ಲಿ ಮುಖಂಡರಿಗೆ ಕಿವಿಮಾತು ಹೇಳಿದರು.

Comments are closed.