ರಾಷ್ಟ್ರೀಯ

400 ಮೀಟರ್ ಅಂತರದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್​: ಗ್ರಾಫ್​ ಮೂಲಕ ಇಸ್ರೋ ಮಾಹಿತಿ​

Pinterest LinkedIn Tumblr


ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲವಾದರೂ ಕೂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ(ಇಸ್ರೋ) ಪ್ರಯತ್ನಕ್ಕೆ ಇಡೀ ದೇಶವೇ ಬೆಂಬಲವಾಗಿ ನಿಂತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಹೊತ್ತೊಯ್ದಿದ್ದ ವಿಕ್ರಂ​ ಲ್ಯಾಂಡರ್ ಅನ್ನು ಸಾಫ್ಟ್​ ಲ್ಯಾಂಡಿಂಗ್ ಮಾಡುವ​ ವೇಳೆ ಚಂದ್ರನಿಂದ 2.1 ಕಿ.ಮೀ. ದೂರದಲ್ಲಿದ್ದಾಗ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗಿತ್ತು. ಆದರೆ, ಚಂದ್ರನಿಂದ 400 ಮೀಟರ್​ ಅಂತರದಲ್ಲಿದ್ದಾಗ ಮಾತ್ರ ವಿಕ್ರಂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಇಸ್ರೋ ಬುಧವಾರ ಖಚಿತಪಡಿಸಿದೆ.​

ವಿಕ್ರಂ ಲ್ಯಾಂಡರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಬಗ್ಗೆ ಇಸ್ರೋ ಇದೀಗ ಬಿಡುಗಡೆ ಮಾಡಿರುವ ಹೇಳಿಕೆ ಗೊಂದಲ ಸೃಷ್ಟಿ ಮಾಡಿದ್ದರೂ, ವಿಕ್ರಂ​ ಲ್ಯಾಂಡಿಂಗ್​ ಗ್ರಾಫ್​ ಅನ್ನು ಇಸ್ರೋ ಬಿಡುಗಡೆ ಮಾಡಿರುವುದು ಗೊಂದಲಕ್ಕೆ ತೆರೆ ಎಳೆದಿದೆ. ಇದರೊಂದಿಗೆ ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೋ ಮುಂದುವರಿಸಿದೆ. ಆರ್ಬಿಟರ್​ ರವಾನಿಸಿದ ಚಂದ್ರನ ಚಿತ್ರದಲ್ಲಿ ವಿಕ್ರಂ ಇರುವ ಗುರುತು ಪತ್ತೆಯಾಗಿತ್ತು.

ಚಂದ್ರನ ಸುತ್ತ ಸುತ್ತುತ್ತಿದ್ದ ವಿಕ್ರಂ ಲ್ಯಾಂಡರ್​ 30 ಕಿ.ಮೀ. ಎತ್ತರದಿಂದ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 1.40ಕ್ಕೆ ಆರಂಭಿಸಲಾಗಿತ್ತು. ಹಂತ ಹಂತವಾಗಿ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ ವಿಕ್ರಂ ಲ್ಯಾಂಡರ್​ 1.55 ಕ್ಕೆ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡ್​ ಆಗಬೇಕಿತ್ತು. ಆದರೆ 2.1 ಕಿ.ಮೀ. ಎತ್ತರದಲ್ಲಿ ಲ್ಯಾಂಡರ್​ನಿಂದ ಸಿಗ್ನಲ್​ ಕಡಿತಗೊಂಡಿತ್ತು ಎಂದು ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ಇಸ್ರೋ ಮಾಹಿತಿ ನೀಡಿತ್ತು.

Comments are closed.