
ನವದೆಹಲಿ (ಆ.7): ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ನಮ್ಮನ್ನು ಅಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿದ್ದ ಅವರು ವಿದೇಶಾಂಗ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದರು. ಕೇಂದ್ರ ಸಚಿವೆಯಾದರೂ ಸುಷ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯರ ಕಷ್ಟವನ್ನೂ ಆಲಿಸುತ್ತಿದ್ದರು. ಟ್ವೀಟ್ಗೆ ಉತ್ತರಿಸುವ ಮೂಲಕ ಸಂತ್ರಸ್ತರಿಗೆ ಅಭಯ ಹಸ್ತ ನೀಡುತ್ತಿದ್ದರು. ಅವರ ಸಾವಿನ ವಾರ್ತೆ ಕೇಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪದ ಸುರಿಮಳೆಯೇ ಹರಿದು ಬಂದಿದೆ.
ಸಾಮಾಜಿಕ ಜಾಲತಾಣದಿಂದ ಬದಲಾವಣೆ ಸಾಧ್ಯ ಎಂಬುದನ್ನು ಸುಷ್ಮಾ ಬಲವಾಗಿ ನಂಬಿದ್ದರು. 2014ರಲ್ಲಿ ಮೋದಿ ಸಚಿವಾಲಯ ಸೇರಿಕೊಂಡ ನಂತರ ಮತದಾರರ ಜೊತೆ ಸಂಪರ್ಕದಲ್ಲಿರಲು ಅವರು ಬಳಸಿದ್ದು ಟ್ವಿಟ್ಟರ್. 2019ರ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸ್ಪರ್ಧಿಸುವುದಿಲ್ಲ ಎನ್ನುವ ವಿಚಾರ ತಿಳಿಯುತ್ತಿದ್ದಂತೇ ಅನೇಕರು ಮರುಕ ವ್ಯಕ್ತಪಡಿಸಿದ್ದರು.
2017ರಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲು ಪಾಕಿಸ್ತಾನದ ಬಾಲಕಿಗೆ 1 ವರ್ಷದ ವೀಸಾ ನೀಡಿದ್ದರು. ನಂತರ ಮತ್ತೆರಡು ಪಾಕಿಸ್ತಾನದ ನಾಗರೀಕರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಇದೇ ರೀತಿ ವೀಸಾ ನೀಡಿ ಟ್ವಿಟ್ಟರ್ನಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದರು.
2015ರಲ್ಲಿ ಭಾರತೀಯನ್ನು ಮದುವೆಯಾದ ಯೆಮೆನ್ ಮಹಿಳೆಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಸಂತ್ರಸ್ತೆ ಟ್ವೀಟ್ ಮಾಡುವ ಮೂಲಕ ಸಹಾಯ ಕೋರಿದ್ದರು. ತಕ್ಷಣ ಟ್ವೀಟ್ಗೆ ಅವರು ಸ್ಪಂದಿಸಿದ್ದರು.
ಇರಾನ್ನ ಬಸ್ರಾದಲ್ಲಿ ಸಿಲುಕಿದ 168 ಭಾರತೀಯರಿಗೆ ಸುಷ್ಮಾ ನೆರವಿನ ಸಹಾಯ ಚಾಚಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ನೋಡಿ ಅವರು ಸಹಾಯ ಮಾಡಲು ಮುಂದಾಗಿದ್ದರು ಎಂಬುದು ವಿಶೇಷ.
ಕಳೆದ ವರ್ಷ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದಾಗ ಭಾರೀ ಮಳೆಯಿಂದಾಗಿ ಭಾರತದ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಸುಷ್ಮಾ ಸ್ವರಾಜ್ ಸಹಾಯಕ್ಕೆ ಮುಂದಾಗಿದ್ದರು. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಿದ್ದರು.
ಇನ್ನು, ಕೆಲವರು ದುರುದ್ದೇಶ ಇಟ್ಟುಕೊಂಡು ಮಾಡುತ್ತಿದ್ದ ಟ್ವೀಟ್ಗೂ ಸುಷ್ಮಾ ತಿರುಗೇಟು ನೀಡಿದ್ದಿದೆ. “ನನಗೆ ಹಾಳಾದ ರೆಫ್ರಿಜರೇಟರ್ ನೀಡಿದ್ದಾರೆ. ಅದನ್ನು ಹಿಂಪಡೆಯಲು ಒಪ್ಪುತ್ತಿಲ್ಲ. ಇದಕ್ಕೆ ಸಹಾಯ ಮಾಡಿ,” ಎಂದು ಸುಷ್ಮಾ ಸ್ವರಾಜ್ ಬಳಿ ವ್ಯಕ್ತಿಯೋರ್ವ ಟ್ವೀಟ್ ಮಾಡಿ ಕೋರಿದ್ದ. ಇದಕ್ಕೆ ಉತ್ತರಿಸಿದ್ದ ಸುಷ್ಮಾ, “ರೆಫ್ರಿಜರೇಟರ್ ವಿಚಾರದಲ್ಲಿ ನಾನು ಸಹಾಯ ಮಾಡಲು ಸಾಧ್ಯವಿಲ್ಲ.ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವುದರಲ್ಲಿ ನಾನ್ಉ ಬ್ಯುಸಿ ಇದ್ದೇನೆ,” ಎಂದು ಬರೆದುಕೊಂಡಿದ್ದರು.
ಇದು ಕೆಲವೇ ಕೆಲವು ಉದಾಹರಣೆಗಳಷ್ಟೇ. ಸುಷ್ಮಾ ಸ್ವರಾಜ್ ಅವರು ಇಂಥ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಕೆಲಸಗಳು, ಸಹಾಯಗಳು ಸದಾ ಜನರ ನೆನಪಲ್ಲಿ ಉಳಿಯುತ್ತವೆ.
Comments are closed.