ಕರ್ನಾಟಕ

ತುಮಕೂರಿನಲ್ಲಿ ನನ್ನ ಸೋಲಿನಿಂದ ಒಳ್ಳೆಯದೇ ಆಗಿದೆ: ದೇವೇಗೌಡ

Pinterest LinkedIn Tumblr


ಬೆಂಗಳೂರು (ಆ.7): ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನು ಯಾರನ್ನು ಹೊಣೆ ಮಾಡುವುದಿಲ್ಲ. ನಾನು ಸೋತಿದ್ದು ಒಳ್ಳೆಯದೇ ಆಯಿತು. ಮತ್ತೆ ಕೆಚ್ಚೆದೆಯಿಂದ ಹೋರಾಡಿ ಪಕ್ಷ ಸಂಘಟನೆ ಮಾಡುವೆ. ನನ್ನ ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ಗುಡುಗಿದ್ದಾರೆ.

ಮೈತ್ರಿ ಸರ್ಕಾರದ ಪತನದ ಬಳಿಕ ಪಕ್ಷ ಸಂಘಟನೆಗಾಗಿ ಮುಂದಾಗಿರುವ ಜೆಡಿಎಸ್ ಇಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿತು. ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಜೊತೆ ಅಧಿಕಾರ ಹೋಗಲು ಯಾರೂ ಹೊಣೆ ಅಲ್ಲ. ತಪ್ಪು ನಮ್ಮಲ್ಲೇ ಇರಬಹುದು. ಯಾವಾಗ ಚುನಾವಣೆ ಎದುರಾಗಲಿದೆ ಎಂಬುದು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರ ಮೂರುವರೆ ವರ್ಷ ಅಧಿಕಾರ ಮಾಡಿದ್ರೂ ಚಿಂತೆಯಿಲ್ಲ. ನಾವು ಪಕ್ಷ ಸಂಘಟನೆ ಮಾಡಿ ಹೋರಾಟ ನಡೆಸಬೇಕಿದೆ ಎಂದರು.

14 ತಿಂಗಳ ಸರ್ಕಾರ ನಡೆಸಿದ ಕುಮಾರಸ್ವಾಮಿ ಧೃತಿ ಗೆಡದೆ ಸಾಲ ಮನ್ನಾ ಮಾಡಿದ್ದಾರೆ. ಇದನ್ನು ಜನತೆಯ ಮನಸ್ಸಿಗೆ ಕೊಂಡೊಯ್ಯುವ ಶಕ್ತಿ ಕಾರ್ಯಕರ್ತರಿಗೆ ಇದೆ. ಯಾವಾಗ ಚುನಾವಣೆ ಬಂದರೂ ಸಿದ್ಧರಾಗಬೇಕಿದೆ. ಈ ಹಿನ್ನೆಲೆ ಪಕ್ಷ ಸಂಘಟನೆಗೆ ನಾವು ಮೊದಲಾಗಬೇಕಿದೆ. ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಪ್ರಧಾನಿಗಳು ಕರೆ ನೀಡಿದರು.

ಈ ತಿಂಗಳಲ್ಲಿ ಮಹಿಳೆಯರ ಸಮಾವೇಶ ಮಾಡುತ್ತೇನೆ. ಆಗಸ್ಟ್​ನಲ್ಲಿ ಉತ್ತರ ಕರ್ನಾಟಕದ ಲ್ಲಿ ರೈತರ ಸಮಾವೇಶ ಮಾಡುವೆ. ಮತ್ತೆ ಪಕ್ಷ ಕಟ್ಟಬೇಕಿದೆ. ಪಕ್ಷದಿಂದ ಯಾರು ಹೋದರು. ಯಾರು ಉಳಿದಿದ್ದಾರೆ ಎನ್ನುವುದನ್ನು ಪ್ರಶ್ನೆ ಮಾಡುವುದಿಲ್ಲ. ಉಪಚುನಾವಣೆಯಲ್ಲಿ ಆಯಾ ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇನೆ ಎಂದರು

ಪಕ್ಷ ಕಟ್ಟಲು ವೈಎಸ್​ವಿ ದತ್ತಾ ಕರೆ

ಈ ವೇಳೆ ಪಕ್ಷ ಸಂಘಟನೆ ಕುರಿತು ಮಾತನಾಡಿದ ವೈಎಸ್​ವಿ ದತ್ತಾ, ಅಧಿಕಾರ ಇದ್ದಾಗ ನಾವು ಕಾರ್ಯಕರ್ತರನ್ನು ಕಡೆಸಿದ್ದೇವೆ. ಅದರ ಪರಿಣಾಮವೇ ಪಕ್ಷ ಈ ಮಟ್ಟಕ್ಕೆ ಕುಸಿದಿದೆ. ಈ ಮಾತನ್ನ ಸ್ವತಃ ದೇವೇಗೌಡರೇ ನನ್ನ ಬಳಿ ಹೇಳಿದ್ದಾರೆ. ಹಾಗಾಗಿ ಮತ್ತೆ ಪಕ್ಷ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದಾರೆ. ಗೌಡರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟೋಣ ಎಂದು ಕರೆ ನೀಡಿದರು.

ಪಕ್ಷದ ಎಲ್ಲ ವಿಭಾಗದ ಘಟಕ ನಿಷ್ಕ್ರಿಯವಾಗಿದೆ. ಪಕ್ಷವನ್ನು ನಾವು ಸಂಘಟನೆ ಮಾಡಬೇಕಾದರೆ ಬಿಜೆಪಿಯಂತೆ ನಾವೂ ಸದಸ್ಯತ್ವ ನೋಂದಣಿ ಮಾಡಬೇಕಿದೆ. ಕೇವಲ ನೆಪ ಮಾತ್ರಕ್ಕೆ ಸದಸ್ಯರನ್ನಾಗಿಸುವ ಬದಲು, ಪ್ರಾದೇಶಿಕ ಪಕ್ಷ ಬೇಕೇಬೇಕು ಎಂಬ ಭಾವನೆ ಜನರಲ್ಲಿ ಮೂಡಿಸಬೇಕಿದೆ ಎಂದರು.

ಪ್ರಾದೇಶಿಕ ಪಕ್ಷಕ್ಕೆ ಕುಟುಂಬ ರಾಜಕಾರಣ ಮಾಡುತ್ತಾರೆ ಎಂಬ ಆರೋಪಕ್ಕೆ ಒಳಗಾಗುತ್ತವೆ. ಈ ರೀತಿ ಆರೋಪ ಮಾಡುವುದು ಸುಲಭ. ಆದರೆ ಪಕ್ಷ ಕಟ್ಟುವ ಕಷ್ಟ ನಮಗೆ ಗೊತ್ತು. ಒರಿಸ್ಸಾದಲ್ಲಿ ಬಿಜುಜನತಾ ದಳ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವನ್ನು ಮಕ್ಕಳು ಮುಂದುವರೆಸಬೇಕಾಗಿ ಬಂತು. ತಂದೆ ಕಟ್ಟಿದ ಪಕ್ಷವನ್ನು ಮಕ್ಕಳೇ ಮುಂದುವರೆಸಬೇಕಾಗಿ ಬಂತು ಅದೇ ರೀತಿ ಪರಿಸ್ಥಿತಿ ರಾಜ್ಯದಲ್ಲಿ ಬಂತು ಇದರಲ್ಲಿ ವಿಶೇಷವೇನಿಲ್ಲ. ಇದನ್ನೇ ಕುಟುಂಬ ರಾಜಕಾರಣ ಎಂದುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

102 ಡಿಗ್ರಿ ಜ್ವರದಲ್ಲಿಯೂ ಸಮಾವೇಶಕ್ಕೆ ಆಗಮಿಸಿದ ಎಚ್​ಡಿಕೆ

ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆದರೂ ಕೂಡ ಸಮಾವೇಶಕ್ಕೆ ಹಾಜರಾಗಿದ್ದಾರೆ. ಕೈಗೆ ಸೂಜಿ ಹಾಕಿದ್ದರೂ ಸಮಾವೇಶದ ವೇದಿಕೆ ಏರಿದ್ದಾರೆ. ವೇದಿಕೆ ಮೇಲೆ ಕೂತರೆ ತನಗೆ ಯಾವ ಅನಾರೋಗ್ಯವೂ ಕಾಣುವುದಿಲ್ಲ ಎಂದು ಅವರು ಹೇಳಿದರು.

Comments are closed.