ಕರ್ನಾಟಕ

ಯಡಿಯೂರಪ್ಪ ಎಷ್ಟು ದಿನ ಒನ್ ಮ್ಯಾನ್ ಶೋ ಸರಕಾರ ನಡೆಸುತ್ತಾರೋ ನೋಡುತ್ತೇವೆ: ಡಿಕೆಶಿ

Pinterest LinkedIn Tumblr


ಬೆಂಗಳೂರು:ನಾವು ಯಡಿಯೂರಪ್ಪನವರಂತೆ ಆತುರ ಪಡಲ್ಲ. ಎಷ್ಟು ದಿನ ಒನ್ ಮ್ಯಾನ್ ಶೋ ಆಗಿ ಸರಕಾರ ನಡೆಸ್ತಾರೋ ನಡೆಸಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೂ ರಾಜ್ಯ ಸರ್ಕಾರದಲ್ಲಿ ಸಂಪುಟ ರಚನೆಯಾಗದ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ‘ಬಿಎಸ್ ಯಡಿಯೂರಪ್ಪನವರು ಯಾರು ಏನು ಕೇಳಿದರು ದೇಹಲಿಯನ್ನು ತೋರಿಸುತ್ತಾರೆ. ಅವರು ವಿರೋಧ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಅವರ ಸರ್ಕಾರ ರಚನೆಯಾಗುವ ಮುನ್ನವೇ ರೈತರ ಕಾಳಜಿ, ಸಾಲ ಮನ್ನಾ ಅಂತಾ ಕೂಗಾಡುತ್ತಿದ್ದರು. ಅವರಂತೆ ನಾವು ಆತುರದಲ್ಲಿ ಹೇಳಿಕೆ ನೀಡುವುದಿಲ್ಲ ಎಂದರು.

ಸರ್ಕಾರ ರಚನೆಯಾಗಿ 10 ದಿನ ಆದರೂ ಯಡಿಯೂರಪ್ಪ ಒನ್ ಮ್ಯಾನ್ ಶೋ ನಡೆಸುತ್ತಿದ್ದಾರೆ. ಅವರಿಗೆ ಏನು ಕಷ್ಟ ಇದೆಯೋ ನೋಡೋಣ. ಎಷ್ಟು ದಿನ ಒನ್ ಮ್ಯಾನ್ ಶೋ ನಡೆಸುತ್ತಾರೆ ನೋಡೋಣ. ಬೇಕಾದರೆ 100 ದಿನ ಸಮಯ ತೆಗೆದುಕೊಳ್ಳಲಿ. ಅಧಿಕಾರ ಇಲ್ಲದಾಗ ರೈತರ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದ ಅವರು ಈಗ ಸಿಕ್ಕಿರುವ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ರಾಜ್ಯದ ಜನ ವಿದ್ಯಾವಂತರಿದ್ದಾರೆ, ಬುದ್ಧಿವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ ಅವರು ಎಲ್ಲವನ್ನು ನೋಡುತ್ತಿದ್ದಾರೆ ಎಂದರು.

ಇನ್ನು ಪಕ್ಷದ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಆಗಮಿಸಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ನಾನು ಅವರ ಅಹವಾಲು ಆಲಿಸಿ ಅವರಿಗೆ ಧೈರ್ಯ ಹೇಳುತ್ತಿದ್ದೇನೆ. ಇನ್ನು ಪಕ್ಷದಲ್ಲಿನ ಹುದ್ದೆ ತೀರ್ಮಾನದ ಬಗ್ಗೆ ಹೈಕಮಾಂಡ್ ಸಮಿತಿ ರಚನೆ ಮಾಡಿದ್ದು ಅವರು ನೋಡಿಕೊಳ್ಳುತ್ತಾರೆ. ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದಾರೆ. ಅವರು ಏನಾದರೂ ಸಲಹೆ ಕೇಳಿದರೆ ಕೊಡುತ್ತೇನೆ. ಇಲ್ಲದಿದ್ರೆ ನನ್ನ ಪಾಡಿಗೆ ನನ್ನ ಕೆಲಸ ನೋಡಿಕೊಳ್ಳುತ್ತೇನೆ ಎಂದರು.

Comments are closed.