ನವದೆಹಲಿ: ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟ ಇವತ್ತಿನಿಂದ ಅಸ್ತಿತ್ವಕ್ಕೆ ಬಂದಿದೆ. ಹಿಂದಿನ ಎನ್ಡಿಎ ಸರ್ಕಾರದಲ್ಲಿ 76 ಸದಸ್ಯರನ್ನು ಹೊಂದಿದ್ದ ಸಂಪುಟದ ಗಾತ್ರ ಈಗ ಎನ್ಡಿಎ-2 ಸರ್ಕಾರದಲ್ಲಿ 58ಕ್ಕೆ ಇಳಿದಿದೆ. ಅನೇಕ ಘಟಾನುಘಟಿಗಳು ತೆರೆಯ ಮರೆಗೆ ಸರಿದ್ದಾರೆ. ಅಮಿತ್ ಶಾ ಅವರು ಸರಕಾರಕ್ಕೆ ಪ್ರವೇಶ ಮಾಡಿದ್ದಾರೆ. ಮೋದಿ ಮತ್ತು ರಾಜನಾಥ್ ಸಿಂಗ್ ಬಿಟ್ಟರೆ ಸರಕಾರದ ಮೂರನೇ ಅತೀ ದೊಡ್ಡ ಶಕ್ತಿಯಾಗಿ ಅಮಿತ್ ಶಾ ಇರಲಿದ್ದಾರೆ. ಅಂದರೆ ಅಮಿತ್ ಶಾ ಅವರು ಸರಕಾರದ ನಂ. 3 ಆಗಿದ್ದಾರೆ. ನಿತಿನ್ ಗಡ್ಕರಿ ಅವರನ್ನೂ ಹಿಂದಿಕ್ಕಿ ಅವರು ಪ್ರಮುಖ ಸ್ಥಾನ ಹೊಂದಿದ್ದಾರೆ.
ಮೋದಿ ಸರಕಾರದ ಇನ್ನೊಂದು ಪ್ರಮುಖ ಅಚ್ಚರಿ ಸೇರ್ಪಡೆ ಎಂದರೆ ಎಸ್. ಜೈಶಂಕರ್ ಅವರದ್ದು. ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿದ್ದ ಸುಬ್ರಮಣ್ಯಂ ಜೈಶಂಕರ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ವಿದೇಶಾಂಗ ಕಾರ್ಯದರ್ಶಿಯಾಗಿ ಜೈಶಂಕರ್ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು.
ಸಂಪುಟದಿಂದ ಹೊರಗುಳಿದಿರುವ ಪ್ರಮುಖರು:
ಹಿಂದಿನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನ ನಿರ್ವಹಿಸಿದ್ದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸುರೇಶ್ ಪ್ರಭು, ಜೆ.ಪಿ. ನಡ್ಡಾ, ಮನೇಕಾ ಗಾಂಧಿ, ರಾಧಾ ಮೋಹನ್ ಸಿಂಗ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಜುವಲ್ ಓರಮ್ ಮತ್ತು ಜಯಂತ್ ಸಿನ್ಹಾ ಅವರ ಈ ಬಾರಿ ಲಭ್ಯವಿಲ್ಲ. ಕರ್ನಾಟಕದಿಂದ ಅನಂತಕುಮಾರ್ ಹೆಗಡೆ ಮತ್ತು ರಮೇಶ್ ಜಿಗಜಿಣಗಿ ಅವರಿಗೆ ಕೊಕ್ ನೀಡಲಾಗಿದೆ.
ಇವರ ಪೈಕಿ ಅರುಣ್ ಜೇಟ್ಲಿ ಅವರು ಅನಾರೋಗ್ಯದ ಕಾರಣವೊಡ್ಡಿ ಸರಕಾರದಿಂದ ದೂರ ಉಳಿಯುವುದಾಗಿ ಕೆಲ ದಿನಗಳ ಮೊದಲೇ ಘೋಷಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವೆಯಾಗು ಉತ್ತಮ ಕೆಲಸ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಎನಿಸಿದೆ. ಸುಷ್ಮಾ ಅಡಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಎಸ್. ಜೈಶಂಕರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗುವ ಸಾಧ್ಯತೆ ಇದೆ. ಸುಷ್ಮಾ ಸ್ವರಾಜ್ ಅವರಿಗೂ ಆರೋಗ್ಯ ಸಮಸ್ಯೆಗಳಿದ್ದು, ಅದೇ ಕಾರಣದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲವೆನ್ನಲಾಗಿದೆ.
ಇನ್ನು, ರೈಲ್ವೆ ಸಚಿವರಾಗಿ ಮತ್ತು ವಾಣಿಜ್ಯ ಸಚಿವರಾಗಿ ಅತೀವ ಶ್ರಮ ಪಟ್ಟಿದ್ದ ಸುರೇಶ್ ಪ್ರಭು ಅವರನ್ನೂ ಕೈಬಿಡಲಾಗಿದೆ. ಕ್ರೀಡಾ ಸಚಿವರಾಗಿ ಉತ್ತರ ಕೆಲಸ ಮಾಡಿದ್ದ ರಾಜ್ಯವರ್ಧನ್ ಸಿಂಗ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿಲ್ಲ. ನಾಲ್ಕು ಬಾರಿ ಕೇಂದ್ರ ಸಚಿವೆಯಾಗಿದ್ದ ಗಾಂಧಿ ಕುಟುಂಬದ ಸದಸ್ಯೆ ಮನೇಕಾ ಗಾಂಧಿ, ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರನ್ನು ಡ್ರಾಪ್ ಮಾಡಿರುವುದೂ ಕೂಡ ಅಚ್ಚರಿ ಮೂಡಿಸಿದೆ.
ಮನೇಕಾ ಗಾಂಧಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಜೆ.ಪಿ. ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರೊಂದಿಗೆ ವಾಜಪೇಯಿ ಕಾಲದಲ್ಲಿ ಬಿಜೆಪಿ ಸ್ತಂಭಗಳೆನಿಸಿದ್ದವರಲ್ಲಿ ಬಹುತೇಕರು ನೇಪಥ್ಯಕ್ಕೆ ಸರಿದಂತಾಗಿದೆ. ಆಡ್ವಾಣಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಮುರಳಿ ಮನೋಹರ್ ಜೋಷಿ ಅವರನ್ನು 2014ರಲ್ಲೇ ಹೊರಗುಳಿಸಲಾಗಿತ್ತು. ಇದೀಗ ಆ ಟೀಮ್ನಲ್ಲಿದ್ದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರೂ ಹೊರಬಿದ್ದಿದ್ದಾರೆ. ಇನ್ನೀಗ ನಿತಿನ್ ಗಡ್ಕರಿ ಒಬ್ಬರೂ ಕೊಂಡಿಯಾಗಿ ಉಳಿದಿದ್ಧಾರೆ.
Comments are closed.