ರಾಷ್ಟ್ರೀಯ

ಪಾಕಿಸ್ತಾನಕ್ಕೆ ಹೋಗು ಎಂದು ಅರಚಿ ಗುಂಡಿಟ್ಟ: ಬಿಹಾರದಲ್ಲಿ ಮುಸ್ಲಿಮನ ಪರಿಪಾಟಲು

Pinterest LinkedIn Tumblr


ಪಾಟ್ನಾ: ಬಿಹಾರದ ಬೇಗುಸರಾಯ್​ನಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬನಿಗೆ ಗುಂಡೇಟು ಹೊಡೆದ ಘಟನೆ ವರದಿಯಾಗಿದೆ. ಹಲ್ಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ಗುಂಡೇಟು ತಿಂದ ಮೊಹಮ್ಮದ್ ಖಾಸಿಮ್ ಅವರು ನೀಡಿರುವ ಹೇಳಿಕೆ ಪ್ರಕಾರ, ತಾನು ಮುಸ್ಲಿಮನೆಂಬ ಕಾರಣಕ್ಕೆ ತನಗೆ ಗುಂಡೇಟು ಬಿದ್ದಿತಂತೆ. ಆರೋಪಿಯನ್ನು rಆಜೀವ್ ಯಾದವ್ ಎಂದು ಗುರುತಿಸಲಾಗಿದೆ.

ಕುಂಭಿ ಗ್ರಾಮದಲ್ಲಿ ಸೋಪು, ಡಿಟರ್ಜೆಂಟ್​ಗಳ ಸೇಲ್ಸ್​ಮನ್ ಆಗಿರುವ ಮೊಹಮ್ಮದ್ ಖಾಸಿಂ ಅವರು ಘಟನೆಯನ್ನು ವಿವರಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

“ದಾರಿಯಲ್ಲಿ ಹೋಗುವಾಗ ರಾಜೀವ್ ಯಾದವ್ ನನ್ನನ್ನು ತಡೆದರು. ನಂತರ ನನ್ನ ಹೆಸರು ಕೇಳಿದರು. ನಾನು ಹೆಸರು ಹೇಳಿದಾಗ, ನೀನು ಪಾಕಿಸ್ತಾನಕ್ಕೆ ಹೋಗು ಎಂದು ಕಿರುಚಿ ನನಗೆ ಗುಂಡು ಹೊಡೆದರು“ ಎಂದು ಮೊಹಮ್ಮದ್ ಖಾಸೀಂ ಈ ವಿಡಿಯೋದಲ್ಲಿ ಹೇಳುತ್ತಿರುವುದು ತಿಳಿದುಬಂದಿದೆ.

ಮೊಹಮ್ಮದ್ ಖಾಸೀಂ ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಯು ಮೊದಲ ಗುಂಡು ಹಾರಿಸಿ ಎರಡನೇ ಗುಂಡು ಹೊಡೆಯಲು ತಯಾರಾಗುತ್ತಿರುವಾಗ ಖಾಸೀಮ್ ಅವರು ಆತನನ್ನು ದೂರ ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಹಲವು ಜನರು ಇದ್ದರಾದರೂ ಈತನ ಕೈಯಲ್ಲಿ ಗನ್ ಇದ್ದರಿಂದ ಎಲ್ಲರೂ ಭಯಭೀತರಾಗಿದ್ದರು. ಹಾಗಾಗಿ ಯಾರೂ ಕೂಡ ನೆರವಿಗೆ ಧಾವಿಸಲಿಲ್ಲ ಎಂದು ಖಾಸೀಮ್ ಹೇಳಿದ್ದಾರೆ.

ಕಳೆದ ಒಂದು ವಾರದಲ್ಲಿ ಮುಸ್ಲಿಮರ ಮೇಲೆ ಹಲ್ಲೆಯಾಗಿರುವ ಮೂರನೇ ಘಟನೆ ಇದಾಗಿದೆ. ಮೇ 22ರಂದು ಮಧ್ಯ ಪ್ರದೇಶದಲ್ಲಿ ಗೋರಕ್ಷಕರೆನ್ನಲಾದ ಗುಂಪೊಂದು ಬೀಫ್ ಸಾಗಿಸುತ್ತಿದ್ದ ಶಂಕೆಯ ಮೇರೆಗೆ ಮೂವರು ಮುಸ್ಲಿಮ್ ಯುವಕರನ್ನು ಥಳಿಸುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಆ ದೃಶ್ಯದ ವಿಡಿಯೋ ಕೂಡ ವೈರಲ್ ಆಗಿತ್ತು. ಮೊನ್ನೆ ಶನಿವಾರದಂದು ಗುರುಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಮುಸ್ಲಿಮ್ ವ್ಯಕ್ತಿಯನ್ನು ತಡೆದು ಆತನ ಟೊಪ್ಪಿ ತೆಗೆದು “ಜೈ ಶ್ರೀರಾಮ್” ಘೋಷಣೆ ಕೂಗುವಂತೆ ಬಲವಂತಪಡಿಸಿದ ಘಟನೆಯೂ ನಡೆದಿತ್ತು.

ಈ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಸಾದುದ್ದೀನ್ ಓವೈಸಿ ಅವರು, ಮುಸ್ಲಿಮರನ್ನು ಟಾರ್ಗೆಟ್ ಪ್ರಾಕ್ಟೀಸ್ ಆಗಿ ಬಳಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

“ಹೆಸರು ಹೇಳಿದ ಮಾತ್ರಕ್ಕೆ ಖಾಸೀಮ್ ಹೆಚ್ಚೂಕಡಿಮೆ ಜೀವ ಕಳೆದುಕೊಳ್ಳುವಂಥ ಪರಿಸ್ಥಿತಿ ಬಂದಿತು. ನನಗೆ ಭಯದ ವಾತಾವರಣ ಕಾಣುತ್ತಿರುವುದು ನಿಜ” ಎಂದು ಒವೈಸಿ ಹೇಳಿದ್ದಾರೆ.

ಅಲ್ಪಸಂಖ್ಯಾತರನ್ನು ವಂಚಿಸಲಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರಿಗೆ ಭಯದ ವಾತಾವರಣ ಇದೆ ಎಂದು ಹೆದರುಸಲಾಗುತ್ತಿದೆ. ವಂಚನೆಗೊಳಗಾದ ಮುಸ್ಲಿಮರ ವಿಶ್ವಾಸ ಗಳಿಸಲು ಪ್ರಯತ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು ಎನ್​ಡಿಎ ಸಂಸದರಿಗೆ ತಿಳಿಹೇಳಿದ್ದರು.

ಪ್ರಧಾನಿ ಅವರ ಆ ಮಾತುಗಳನ್ನು ಉಲ್ಲೇಖಿಸಿದ ಒವೈಸಿ, ಮುಸ್ಲಿಮರನ್ನು ಗುರಿ ಮಾಡುತ್ತಿರುವ ಘಟನೆಗಳಿಗೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ.

“ರಾಜೀವ್ ಯಾದವ್​ಗೆ ಇಷ್ಟು ಧೈರ್ಯ ಎಲ್ಲಿಂದ ಬಂದಿತು? ಮೇಲಿನಿಂದ ಬಂದಿದೆ. ಬಿಜೆಪಿಯ ನಾಯಕತ್ವವು ನಿರಂತರವಾಗಿ ನಮ್ಮನ್ನು ರಕ್ಕಸರಂತೆ ಚಿತ್ರಿಸುತ್ತಿದ್ದಾರೆ. ನಮ್ಮನ್ನು ಪಾಕಿಸ್ತಾನೀಯರಂತೆ ಕಾಣುತ್ತಾರೆ. ಅವರ ಕಣ್ಣಿಗೆ ನಾವು ಮನುಷ್ಯರಂತೆ ಕಾಣುವುದಿಲ್ಲ. ನಾವು ಟಾರ್ಗೆಟ್ ಪ್ರಾಕ್ಟೀಸ್ ಆಗಿದ್ದೇವೆ” ಎಂದು ಓವೈಸ್ ಟ್ವೀಟ್ ಮಾಡಿದ್ದಾರೆ.

Comments are closed.