ಕರ್ನಾಟಕ

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಿ ಎಂದ ಮಹೇಶ್​ ಕುಮಟಳ್ಳಿ​

Pinterest LinkedIn Tumblr


ಬೆಂಗಳೂರು(ಮೇ 27): ಕಾಂಗ್ರೆಸ್ ಬಂಡಾಯ ಸಮಸ್ಯೆಗೆ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಹೇಶ್ ಕುಮಟಳ್ಳಿ ಅವರು ಕಾಂಗ್ರೆಸ್ ಬಂಡಾಯ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರೂ ಸಂಘಟನಾ ಚತುರರಾಗಿದ್ದಾರೆ. ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದ ಹಾಗೆಯೇ ಅಸಮಾಧಾನಿತ ಶಾಸಕ ರಮೇಶ್ ಜಾರಕಿಹೊಳಿ ಅವರಿಗೂ ಸಂಪುಟದಲ್ಲಿ ಸ್ಥಾನ ಕೊಡಿ ಎಂದು ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಸಲಹೆ ನೀಡಿದ್ದಾರೆ.

ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಮಹೇಶ್ ಕುಮಟಳ್ಳಿ ಅವರು ಇದೇ ವಿಚಾರವಾಗಿ ಚರ್ಚಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಲು ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಮಹೇಶ್ ಕುಮಟಳ್ಳಿ ಮೂಲಕ ರಮೇಶ್ ಜಾರಕಿಹೊಳಿ ಅವರ ಮನವೊಲಿಸಲು ಸಿಎಂ ಯತ್ನಿಸಿದರೆನ್ನಲಾಗಿದೆ.

ಆದರೆ, ಬಂಡಾಯದ ವಿಚಾರವಾಗಿ ತಾನು ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದನ್ನು ಮಹೇಶ್ ಕುಮಟಳ್ಳಿ ಇದೇ ವೇಳೆ ತಳ್ಳಿಹಾಕಿದ್ದಾರೆ. “ಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವನು ನಾನಲ್ಲ. ಎಲ್ಲವನ್ನೂ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಆಪರೇಷನ್ ಕಮಲದ ಬಗ್ಗೆ ಮಾತನಾಡುವುದಾದರೆ ಹೀಗ್ಯಾಕೆ ಬರಲಿ? ರಹಸ್ಯವಾಗಿ ಬಂದಿರುತ್ತಿದ್ದೆ” ಎಂದು ಅಸಮಾಧಾನಿತ ಕಾಂಗ್ರೆಸ್ ಶಾಸಕರ ಹೇಳಿದ್ದಾರೆ.

“ಅಥಣಿ ಕ್ಷೇತ್ರದಲ್ಲಿರುವ ಕೃಷ್ಣಾ ನದಿಯಲ್ಲಿ ನೀರಿಲ್ಲ. ಹೀಗಾಗಿ ನಮ್ಮ ‌ಕ್ಷೇತ್ರದ ಜನರಿಗೆ ಕುಡಿಯಲು ನೀರಿಲ್ಲ. ಮಹಾರಾಷ್ಟ್ರ ದಿಂದ ನೀರು ಬಿಡಿಸುವ ವಿಚಾರವಾಗಿ ನಾನು ತಲೆ ಕೆಡಿಸಿಕೊಂಡಿದ್ದೇನೆ. ಈ ವಿಚಾರಕ್ಕೆ ಸಿಎಂ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ ಅಷ್ಟೇ. ಇದಕ್ಕೆ ಬೇರೆ ಯಾವುದೇ ವಿಶೇಷತೆ ಕಲ್ಪಿಸುವುದು ಬೇಡ” ಎಂದು ಮಹೇಶ್ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ:

ಒಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಲ್ಲಿ ರಮೇಶ್​ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಬೇಡಿಕೆ ಮುಂದಿಟ್ಟು ಮಹೇಶ್​ ಕುಮಟಳ್ಳಿ ವಾಪಸಾದರೆ, ಮಂತ್ರಿ ಸ್ಥಾನ ಬೇಡ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ರಮೇಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಭೇಟಿ ಮಾಡಿದ ನಂತರ ಮಹೇಶ್​ ಕುಮಟಳ್ಳಿ ಜಾರಕಿಹೊಳಿಯವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಚಿವ ಸ್ಥಾನವೂ ಬೇಡ ಏನೂ ಬೇಡ, ರಾಜೀನಾಮೆ ನೀಡಿಯೇ ಸಿದ್ಧ ಎಂದು ಜಾರಕಿಹೊಳಿ ಹೇಳಿದ್ದಾರೆ. ಕಡೆಗೆ ಮತ್ತೆ ಸಿಎಂ ಭೇಟಿ ಮಾಡಿದ ಕುಮಟಳ್ಳಿ, ರಮೇಶ್​ ಜಾರಕಿಹೊಳಿಯವರ ನಿರ್ಧಾರವನ್ನು ತಲುಪಿಸಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರೊಂದಿಗೆ ಸಿದ್ದರಾಮಯ್ಯ ಮಾತುಕತೆ

ಬಿಜೆಪಿ ಸಂಪರ್ಕದಲ್ಲಿದ್ದಾರೆನ್ನಲಾದ ಅತೃಪ್ತ ಕಾಂಗ್ರೆಸ್ ಶಾಸಕರ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವ ಸ್ಥಾನ ನೀಡದ ಹಿನ್ನೆಲೆ ಅತೃಪ್ತಗೊಂಡಿರುವ 9 ಕಾಂಗ್ರೆಸ್ ಶಾಸಕರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಯಕತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅತೃಪ್ತ ಶಾಸಕರ ಜತೆ ಮಾಜಿ ಸಿಎಂ ಸಿದ್ದರಾಮುಯ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರಾದ ಬಿ.ಸಿ. ಪಾಟೀಲ್, ಆನಂದ್ ಸಿಂಗ್, ನಾಗೇಶ್, ಕಂಪ್ಲಿ ಶಾಸಕ ಗಣೇಶ್, ಶಿವರಾಮ್ ಹೆಬ್ಬಾರ್, ಪ್ರತಾಪ್ ಗೌಡ ಪಾಟೀಲ್, ಪಕ್ಷೇತರ ಶಾಸಕ ಆರ್. ಶಂಕರ್ ಅವರ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದರೆನ್ನಲಾಗಿದೆ

Comments are closed.