ಕರ್ನಾಟಕ

ಸ್ವಂತ ಹಣದಲ್ಲಿ ಪ್ರಾಣಿಗಳ ದಾಹ ನೀಗಿಸಲು ಕಪ್ಪತ್ತಗುಡ್ಡದಲ್ಲಿ ನೀರಿನ ಟ್ಯಾಂಕರ್ ಮೂಲಕ ಕೊಳಗಳ ಭರ್ತಿ

Pinterest LinkedIn Tumblr


ಗದಗ: ಒಂದು ಕಾಲದಲ್ಲಿ ಮಳೆಗೆ ಹೆಸರಾಗಿದ್ದ ಕಪ್ಪತ್ತಗುಡ್ಡ ಪ್ರದೇಶದಲ್ಲೀಗ ನೀರಿಗೆ ಬರ ಎದುರಾಗಿದೆ. ಕಾಡು ಪ್ರಾಣಿ, ಪಕ್ಷಿಗಳ ದಾಹ ಹೆಚ್ಚಾಗಿ ಪರದಾಡುವಂತಾಗಿದೆ. ಅದ್ರಲ್ಲೂ ಈ ಬಾರಿ ಗದಗ ಜಿಲ್ಲೆಯಲ್ಲಿ ಸೂರ್ಯನ ಪ್ರತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹೀಗಾಗಿ ಬಿಸಿಲಿನ ಹೊಡೆತಕ್ಕೆ ಪ್ರಾಣಿಗಳು ಕಂಗಾಲಾಗಿವೆ. ಇಡೀ ಕಪ್ಪತ್ತಗುಡ್ಡದಲ್ಲಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಕಾಡು ಪ್ರಾಣಿಗಳು ನೀರಿಗಾಗಿ ‌ನಾಡಿಗೆ ಲಗ್ಗೆ ಇಡಬೇಕಾದ ಪರಿಸ್ಥಿತಿ ಬಂದಿದೆ. ಆದರೆ, ಅದೃಷ್ಟವಶಾತ್, ಅರಣ್ಯ ಇಲಾಖೆ ಸಕಾಲಕ್ಕೆ ಎಚ್ಚೆತ್ತುಕೊಂಡಿದೆ. ಕಾಡುಪ್ರಾಣಿಗಳ ಪರಿಪಾಟಲು ಕಣ್ಣಾರೆ ನೋಡಲಾಗದ ಅರಣ್ಯ ಇಲಾಖೆ ಕೈಕಟ್ಟಿ ಕೂಡದೇ ಮಾನವೀಯತೆ ಮೆರೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ವನ್ಯ ಸಂಪತ್ತಿನ ತಾಣ. ಪ್ರತಿ ವರ್ಷವೂ ಈ ಅರಣ್ಯ ಪ್ರದೇಶದಲ್ಲಿನ ಗಾಳಿ ಬೀಸಿದ ಫಲವಾಗಿ ಜೋರಾಗಿ ಮಳೆ ಬಂದು ಈ ಭಾಗದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಆದ್ರೆ ಇದೀಗ ಬರದ ಬವಣೆಯಿಂದಾಗಿ ಕಪ್ಪತ್ತಗುಡ್ಡದಲ್ಲಿ ಕುಡಿಯೋ ನೀರಿಗೆ ಬರ ಎದುರಾಗಿದೆ. ಆದ್ರೆ, ಮಳೆ ಪ್ರಮಾಣ ಕಡಿಮೆಯಾದಂತೆಲ್ಲಾ ಅನೇಕ ವರ್ಷಗಳ ಬರಗಾಲದಿಂದಾಗಿ ಗುಡ್ಡದಲ್ಲಿನ ಗಿಡಗಳೇ ಒಣಗಿ ಹೋಗ್ತಿವೆ. ಸಧ್ಯ ಗುಡ್ಡದಲ್ಲಿನ ಪ್ರಾಣಿ-ಪಕ್ಷಿಗಳು, ಜಾನುವಾರುಗಳು ಜಲಕ್ಕಾಗಿ ಪರದಾಡುತ್ತಿದ್ದು, ಈಗ ಅರಣ್ಯ ಇಲಾಖೆಯು ಕೊಳಗಳಿಗೆ ನೀರು ತುಂಬಿಸುತ್ತಿದೆ. ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್​ನಿಂದ ನೀರು ತುಂಬಿಸೋ ಕೆಲಸ ಮಾಡುತ್ತಿದೆ. ನಿತ್ಯ ರಾತ್ರಿ ಕೊಳಕ್ಕೆ ನವೀಲು, ಚಿರತೆ, ಹಾವು, ಮುಳ್ಳು ಹಂದಿ, ಕಾಡುಹಂದಿ, ಪುನಗು ಬೆಕ್ಕು ಸೇರಿ ಹತ್ತು ಹಲವು ವನ್ಯ ಜೀವಿಗಳು ನೀರಿನ ದಾಹ ನೀಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ನೀರು ಕುಡಿಯಲು ಬಂದ ನವಿಲು ಗರಿಬಿಚ್ಚಿ ಕುಣಿದ ದೃಶ್ಯ ‌ಮಾತ್ರ ರಮಣಿಯವಾಗಿದೆ. ಅಪರೂಪದ ವನ್ಯ ಸಂಪತ್ತು ಕೊಳಕ್ಕೆ ಬಂದು ನೀರು ಕುಡಿಯೋ ಕೆಲವು ಅಪರೂಪದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಸಿಕ್ಕಿವೆ. ಹೀಗಾಗಿ ಅರಣ್ಯ ಇಲಾಖೆಯ ಈ ಮಾನವೀಯ ಕಾರ್ಯ ಹಾಗೂ ಕಡಕೋಳ ಗ್ರಾಮದ ಅರಣ್ಯ ಸಮಿತಿಯ ಕಳಕಳಿಯ ನಿರ್ವಹಣೆ ನಿಜಕ್ಕೂ ಸಾರ್ಥಕವಾಗ್ತಿದೆ.

ಪ್ರತಿ ವಾರ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಭಾಗದ ಕಡಕೋಳ ವ್ಯಾಪ್ತಿಯಲ್ಲಿ ಪ್ರಾಣಿಗಳ ಅನುಕೂಲಕ್ಕಾಗಿ ಐದು ಕೆರೆ ನಿರ್ಮಿಸಲಾಗಿದೆ. ಪ್ರತಿ ವಾರಕ್ಕೆ 8 ಟ್ಯಾಂಕರ್​ನಷ್ಟು ನೀರು ಪೂರೈಸಲಾಗ್ತಿದೆ. ಇನ್ನು, ಈ ಕಾರ್ಯವನ್ನು ಶಿರಹಟ್ಟಿ ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಡಿಎಫ್ಓ ತಮ್ಮ ಸ್ವಂತ ಹಣದಿಂದ ಈ ಸೇವಾ ಕಾರ್ಯ ಮಾಡ್ತಿರೋದು ಶ್ಲಾಘನೀಯ. ಇದಕ್ಕೆ ಸರ್ಕಾರದ ಯಾವ ಅನುದಾನ ಇಲ್ಲದಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಸ್ವ-ಇಚ್ಛೆಯಿಂದ ಸಮಾಜಮುಖಿ ಕೆಲಸ ಮಾಡ್ತಿದ್ದಾರೆ.

ಮಳೆಬಾರದೇ ಅಂತರ್ಜಲವೂ ಇಲ್ಲದೇ ಗುಡ್ಡದಲ್ಲಿನ ಸಸ್ಯಸಂಕುಲವೇನೋ ಒಣಗಿ ಹೋಗುತ್ತಿವೆ ನಿಜ. ಆದ್ರೆ ಕುಡಿಯಲು ಹನಿ ನೀರಿಲ್ಲದ ಪರಿಣಾಮ ಮೇರುಪರ್ವತದಲ್ಲಿದ್ದ ಪ್ರಾಣಿಪಕ್ಷಿಗಳೆಲ್ಲ ಮರಮರನೇ ಮರಗುತ್ತಾ ಮರಣವಪ್ಪುವ ಕಾಲ ಸನ್ನಿಹಿತವಾಗಿತ್ತು. ಇದನ್ನರಿತ ಅರಣ್ಯಾಧಿಕಾರಿಗಳು ಪ್ರಾಣಿಪಕ್ಷಿಗಳ ಪ್ರಾಣ ಉಳಿಸಲು ಸಕಾಲಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಕೆಲಸವಾಗಿದೆ.

ಒಟ್ಟಿನಲ್ಲಿ, ಅರಣ್ಯಾಧಿಕಾರಿಗಳು ಕೇವಲ ಅರಣ್ಯ ರಕ್ಷಣೆ ಮಾಡದೇ ಅಲ್ಲಿರುವ ಪ್ರಾಣಿ-ಪಕ್ಷಿಗಳಿಗಳ ಮೇಲೆ ಪ್ರೇಮವನ್ನಿಟ್ಟಿದ್ದೂ ಹೆಮ್ಮೆಯ ವಿಷಯ. ಅಧಿಕಾರಿಗಳು ವೈಯಕ್ತಿಕವಾಗಿ ಮಾಡಿರುವ ಈ ಮಾನವೀಯ ಕಾರ್ಯ ಅರಣ್ಯ ಇಲಾಖೆಗೆ ಮಾದರಿಯಾದ್ರೆ ಅದೆಷ್ಟೋ ವನ್ಯ ಸಂಪತ್ತನ್ನು ರಕ್ಷಿಸಲು ಸಾಧ್ಯವಾಗುತ್ತದೆ.

Comments are closed.