ರಾಷ್ಟ್ರೀಯ

ರಾಷ್ಟ್ರ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮಹಾತಂತ್ರ ಹೆಣೆದಿರುವ ದೇವೇಗೌಡ

Pinterest LinkedIn Tumblr


ಬೆಂಗಳೂರು: ಸತತ ಆರು ದಶಕಗಳ ಕಾಲ ಅಧಿಕಾರದ ಕುಚಿಯಲ್ಲೇ ಇರುವ, ದಣಿವರಿಯದ ರಾಜಕಾರಣಿ. ರಾಜಕೀಯ ತಂತ್ರಗಾರಿಕೆಯ ನಿಪುಣ, ಚಾಣಕ್ಷ ಎಂದೇ ದೇಶದ ಘಟಾನುಘಟಿ ನಾಯಕರಿಂದ ಕರೆಸಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಇಂದು 87ನೇ ವರ್ಷದ ಜನ್ಮದಿನದ ಸಂಭ್ರಮ. ಇದೇ ಸಮಯದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೆ ಇಂದಿಗೆ ಸರಿಯಾಗಿ ಒಂದು ವಾರ ಸಮಯವಿದೆ. ಫಲಿತಾಂಶದ ನಂತರ ರಾಷ್ಟ್ರಮಟ್ಟದಲ್ಲಿ 87 ವರ್ಷದ ಎಚ್.ಡಿ.ದೇವೇಗೌಡರ ಪಾತ್ರ ಪ್ರಮುಖವಾಗಿರಲಿದೆ. ಅದಕ್ಕಾಗಿ ದೇವೇಗೌಡರು ಮಹತ್ತರವಾದ ತಂತ್ರವನ್ನೇ ಹೆಣೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಚಾಪು ಮೂಡಿಸಲು ಗೌಡರು ಮುಂದಾಗಿದ್ದಾರೆ.

ಕಳೆದ ಒಂದು ವಾರದಿಂದ ದೇವೇಗೌಡರು ತಮ್ಮ ಹೆಂಡತಿ ಜೊತೆಗೆ ರೆಸಾರ್ಟ್​ನಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ ಗೌಡರು ವಿಶ್ರಾಂತಿ ಪಡೆಯುವ ಸಲುವಾಗಿ ಪತ್ನಿ ಚನ್ನಮ್ಮ‌ ಜೊತೆ ರೆಸಾರ್ಟ್​ನಲ್ಲಿ ಇರಲಿಲ್ಲ. ಕಂಡ ಕಂಡ ದೇವರಿಗೂ ಸುಮ್ಮನೆ ಕೈ ಮುಗಿಯಲಿಲ್ಲ. ತಮ್ಮ‌ ಮಹತ್ವಾಕಾಂಕ್ಷೆ ಈಡೇರಿಕೆಗಾಗಿ ದೇವೇಗೌಡರು ತಮ್ಮ ಮನದೊಳಗೆ ನಡೆಸಿರುವ ಯಜ್ಞ ಇದು. ಕೇಂದ್ರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇಶದ ಪ್ರಧಾನಿ ಆಗುವ ಯಜ್ಞ ಎಂದು ನಿಮಗೆ ಅನಿಸಬಹುದು. ಆದರೆ, ಪ್ರಧಾನಿ ಹುದ್ದೆಗೂ ಮೀರಿದ ಸ್ಥಾನಕ್ಕಾಗಿ ನಡೆಸಿರುವ ಯಜ್ಞ ಅದು. ಅದಕ್ಕಾಗಿಯೇ ದೇವೇಗೌಡರು ರಾತ್ರಿ – ಹಗಲು ನಿದ್ದೆಬಿಟ್ಟು ರಾಜಕೀಯ ತಂತ್ರಗಾರಿಕೆಯ ಬಲೆ ಹೆಣೆದಿದ್ದಾರೆ.

ದೇವೇಗೌಡರು ಪ್ರಧಾನಿ ಹುದ್ದೆಯನ್ನು ಮೀರಿದ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಮಹಾಘಟಬಂಧನ ಬಹುಮತ ಪಡೆದರೆ ಆಗ ಗೌಡರೇ ರಾಯಭಾರಿ ಆಗಲಿದ್ದಾರೆ. ಎಲ್ಲರನ್ನು ಒಟ್ಟುಗೂಡಿಸುವ ಜವಾಬ್ದಾರಿ ಗೌಡರ ಹೆಗಲ ಮೇಲೆ ಬೀಳಲಿದೆ. ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರಬಾಬು ನಾಯ್ಡು, ಕೆಸಿಆರ್, ಅರವಿಂದ್​ ಕೇಜ್ರಿವಾಲ್, ನವೀನ್ ಪಟ್ನಾಯಕ್, ಅಖಿಲೇಶ್ ಯಾದವ್, ಶರದ್ ಪವಾರ್, ಕಮ್ಯುನಿಸ್ಟರು ಸೇರಿದಂತೆ ಮೋದಿ‌ ಮತ್ತು ಬಿಜೆಪಿ ವಿರೋಧಿಗಳನ್ನು ಒಟ್ಟುಗೂಡಿಸುವ ಕೆಲಸವನ್ನು ದೇವೇಗೌಡರು ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಗೌಡರಿಗೆ ರಾಯಭಾರಿ ಜವಾಬ್ದಾರಿ ನೀಡಿದ್ದಾರೆ.

ಮಹಾಘಟ್​ ಬಂಧನ್​ನಲ್ಲಿ ಹಿರಿಯ ಹಾಗೂ ಅನುಭವಿಯಾಗಿರುವ ದೇವೇಗೌಡರೇ ಅಲ್ಲಿ ಗಣನಾಯಕರಾಗಿದ್ದಾರೆ. ಒಂದು ವೇಳೆ ಮಹಾಘಟಬಂಧನ ಸರ್ಕಾರ ರಚಿಸುವ ಅವಕಾಶ ಒದಗಿ ಬಂದರೆ, ಸರ್ಕಾರ ರಚನೆಯಿಂದ ಹಿಡಿದು, ಪ್ರಧಾನಿ ಆಯ್ಕೆಯವರೆಗೂ ಗೌಡರ ಸಲಹೆಯೇ ಪ್ರಮುಖವಾಗಿರಲಿದೆ. ಈ ಸಮಯಕ್ಕಾಗಿಯೇ ದೇವೇಗೌಡರು ಕಾಯುತ್ತಿದ್ದಾರೆ.

ಈ ಹಿಂದೆ ಯುಪಿಎ ಆಡಳಿತಾವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ನೆರಳಿನಲ್ಲೇ ಸರ್ಕಾರ ನಡೆಯುತ್ತಿದ್ದು. ಅವರೇ ಸರ್ಕಾರದ ಸರ್ವೋಚ್ಚ ನಾಯಕರಾಗಿದ್ದರು. ಅವರಂತೆಯೇ ಈಗ ದೇವೇಗೌಡರು ಅಂತಹದ್ದೇ ಅಧಿಕಾರಕ್ಕಾಗಿ ಉಪಾಯ ಹೆಣೆದಿದ್ದಾರೆ. ಮಹಾಘಟಬಂಧನ‌ ಸರ್ಕಾರ ರಚನೆಯಾದರೆ ಅದರ ರೂಪುರೇಷೆ ನಿರ್ಧರಿಸುವ ಸಮನ್ವಯ ಸಮಿತಿಯನ್ನು ರಚಿಸಲಾಗುತ್ತದೆ. ಆ ಸಮಿತಿ ರಚನೆಯಾದರೆ ಗೌಡರೇ ಅದರ ನಾಯಕರಾಗುವುದು ಬಹುತೇಕ ಪಕ್ಕಾ ಆಗಲಿದೆ. ಇದಕ್ಕಾಗಿಯೇ ದೇವೇಗೌಡ ಸರ್ಕಸ್​ ಮಾಡುತ್ತಿದ್ದಾರೆ.

ಮಹಾಘಟಬಂಧನ್​ನಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ ಈ ಸಮನ್ವಯ ಸಮಿತಿ ಅಧ್ಯಕ್ಷ ಹುದ್ದೆಯನ್ನು ಕೇಳದೆ ಇರುವುದಿಲ್ಲ. ಒಂದು ವೇಳೆ ಕಾಂಗ್ರೆಸ್​ ಈ ಸ್ಥಾನಕ್ಕೆ ಪಟ್ಟು ಹಿಡಿದರೂ ಹಿಡಿಯಬಹುದು. ಆಗ ಸಮನ್ವಯ ಸಮಿತಿ‌ ಅಧ್ಯಕ್ಷ ಹುದ್ದೆ ಗೌಡರಿಗೆ ಸಿಗದೆ ಹೋದರೆ, ಪ್ಲಾನ್ ಬಿ ಕೂಡ ಸಿದ್ಧವಾಗಿದೆ. ಅದು ಸಂಚಾಲಕ ಹುದ್ದೆ. ಸಂಚಾಲಕ ಹುದ್ದೆ ಕೂಡ ಪವರ್​ಫುಲ್. ಮೊದಲು ಕಲ್ಲು ಹೊಡೆಯೋದು. ಸಮನ್ವಯ ಸಮಿತಿ ಅಧ್ಯಕ್ಷ ಹುದ್ದೆಗೆ. ಅದು ಸಿಗದಿದ್ದರೆ ಸಂಚಾಲಕ ಹುದ್ದೆಗೆ ಕಲ್ಲು ಹೊಡೆಯಲು ಯೋಚಿಸದ್ದಾರೆ. ಸರ್ಕಾರ ರಚನೆಯಲ್ಲಿ ಗೌಡರ ಪಾತ್ರ ದೊಡ್ಡದಿರುತ್ತದೆ. ಸಾಲದ್ದಕ್ಕೆ ಮಾಜಿ‌ ಪಿಎಂ ಎಂಬ ಹೆಗ್ಗಳಿಕೆ ಕೂಡ ಇದೆ. ಆರು ದಶಕಗಳ ರಾಜಕೀಯ ಅನುಭವ ಇದೆ. ಎಲ್ಲರಿಗೂ ವಯಸ್ಸಿನಲ್ಲಿ ಗೌಡರೇ ಹಿರಿಯಣ್ಣ. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಸೇರಿದಂತೆ ಇತರೆ ನಾಯಕರು ಒಪ್ಪೇ ಒಪ್ಪುತ್ತಾರೆ ಎಂಬ ಖಚಿತತೆ ಮೇಲೆ ದೇವೇಗೌಡರು, ಪ್ರಧಾನಿಯನ್ನೇ ನಿಯಂತ್ರಿಸುವ ಅಧಿಕಾರದ ಮೇಲೆ ಕಣ್ಣು ನೆಟ್ಟಿದ್ದಾರೆ.

Comments are closed.