ಹಾಸನ: ಹಾಸನ ಲೋಕಸಭೆ ಚುನಾವಣೆಯ ಸೋಲು ಗೆಲುವು ಲೆಕ್ಕಾಚಾರಕ್ಕಿಂತ ಹೆಚ್ಚು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಫಿಡವಿಟ್ ವಿವಾದದ ಬಗ್ಗೆ ಚರ್ಚೆ ಆಗುತ್ತಿದೆ. ಪ್ರಜ್ವಲ್ ರೇವಣ್ಣ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಹಾಗೂ ಕಾಂಗ್ರೆಸ್ ಕಾರ್ಯಕರ್ತ ದೇವರಾಜೆಗೌಡ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಮೇ 15 ರಂದು ಡಿಸಿಗೆ ಪತ್ರ ಕಳುಹಿಸಿದ್ದ ಚುನಾವಣೆ ಆಯೋಗ, ಮೇ 17ರ ಮದ್ಯಾಹ್ನ 3 ಗಂಟೆ ಒಳಗೆ ಪ್ಯಾರಾ ವೈಸ್ ವರದಿ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಐದು ಪುಟಗಳ ವರದಿ ನೀಡಿದ್ದಾರೆ.
ದೇವೇಗೌಡರಿಂದ ಸಾಲ ಪಡೆದ ಮಾಹಿತಿ ನೀಡದ, ಹೊಳೆನರಸೀಪುರದ ಕನ್ವೆನ್ಷನ್ ಹಾಲ್ ಪಾಲುದಾರಿಕೆ ಬಗ್ಗೆ ಅಪೂರ್ಣ ಮಾಹಿತಿ ಹಾಗೂ ತೆರಿಗೆ ಘೋಷಣೆ ಮಾಡಿಕೊಳ್ಳದಿದ್ದುದು ಈ ಎಲ್ಲಾ ಆರೋಪಗಳ ಬಗ್ಗೆ ಆದಾಯ ತೆರಿಗೆ ಮೂಲಕ ತನಿಖೆ ನಡೆಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ಕೆಲ ವಿಚಾರಗಳ ಬಗ್ಗೆ ಲೋಕಾಯುಕ್ತರಿಂದ ಮಾಹಿತಿ ಪಡೆಯಲು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ನಿಗದಿತ ಸಮಯಕ್ಕೆ ವರದಿ ನೀಡಿದ್ದೇನೆ ಎಂದಿದ್ದಾರೆ.
ಪ್ರಜ್ವಲ್ ಅವರ ಅಫಿಡವಿಟ್ ಬಗ್ಗೆ ಚುನಾವಣಾ ಏಜೆಂಟ್ ಜಯರಾಂ ಎಂಬುವವರಿಂದ ಸ್ಪಷ್ಟನೆ ಪಡೆದಿರುವ ಡಿಸಿ ಪ್ರಿಯಾಂಕ, ಎಲ್ಲಾ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತರಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, “ಕೆಲವರು ನಮ್ಮ ಅಫಿಡವಿಟ್ ತಪ್ಪಾಗಿದೆ ಎಂದು ದೂರು ನೀಡಿದ್ದಾರೆ. ನಾವು ಸರಿ ಇದೆ ಎಂದು ಪತ್ರ ಕೊಟ್ಟಿದ್ದೇವೆ. ಡಿಸಿಯವರೂ ಸಾಮಾನ್ಯವಾಗಿ ತನಿಖೆ ನಡೆಸುತ್ತಾರೆ. ಇದರಿಂದ ಏನೂ ಆಗಲ್ಲ. ಆರೋಪ ಮಾಡಲು ಕಾಮನ್ ಸೆನ್ಸ್ ಇರಬೇಕು. ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಬಿಜೆಪಿ ಅಭ್ಯರ್ಥಿ ಮಂಜು ವಿರುದ್ಧ ಕಿಡಿ ಕಾರಿದ್ದಾರೆ.
ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರಾಜ್ಯ ಚುನಾವಣಾ ಆಯೋಗಕ್ಕೆ ಐದು ಪುಟಗಳ ವರದಿ ಸಲ್ಲಿಸಿದ್ದು, ಎಲ್ಲಾ ಆರೋಪಗಳಿಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಇಡೀ ಪ್ರಕರಣವನ್ನು ಆದಾಯ ತೆರಿಗೆ ಅಂಗಳಕ್ಕೆ ಶಿಫ್ಟ್ ಮಾಡಿದ್ದಾರೆ. ಒಟ್ಟಾರೆ ಚುನಾವಣಾ ಫಲಿತಾಂಶಕ್ಕಿಂತ ಪ್ರಜ್ವಲ್ ಅಫಿಡವಿಟ್ ಮೇಲೆ ಎಲ್ಲರ ಗಮನ ಇದ್ದು, ಸದ್ಯ ಐಟಿ ಇಲಾಖೆಯ ಮುಂದಿನ ನಡೆ ಬಗ್ಗೆ ತೀವ್ರ ಕೂತೂಹಲ ಮೂಡಿದೆ.