ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್ ಶೋ ವೇಳೆ ಎಬಿವಿಪಿ ಸದಸ್ಯರು ಹಾಗೂ ತೃಣಮೂಲ ಛಾತ್ರ ಪರಿಷದ್ ಬೆಂಬಲಿಗರ ಮಧ್ಯೆ ಘರ್ಷಣೆಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ನಡೆದಿದೆ. ನಗರದ ಶಂಕರ್ ಘೋಷ್ ರಸ್ತೆಯಲ್ಲಿರುವ ವಿದ್ಯಾಸಾಗರ್ ಕಾಲೇಜಿಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು, ಕಾಲೇಜಿನಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿ ಮಾಡಿದ ವರದಿಯಾಗಿದೆ. ಕಾಲೇಜಿನಲ್ಲಿದ್ದ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಹಾಳುಗೆಡವಿದ್ದಾರೆ. ಈ ಸಂಬಂಧ ಪೊಲೀಸರು ಸ್ವಯಂ ದೂರು ದಾಖಲು ಮಾಡಿದ್ದಾರೆ.
ಅನುಮತಿ ಇಲ್ಲದಿದ್ದರೂ ಅಮಿತ್ ರೋಡ್ ಶೋ ನಡೆಸುತ್ತಿದ್ದರು. ಈ ವೇಳೆ, ವಿದ್ಯಾಸಾಗರ್ ಕಾಲೇಜಿನಲ್ಲಿ ಟಿಎಂಸಿಪಿ ಕಾರ್ಯಕರ್ತರು ಕಪ್ಪು ಧ್ವಜ ಹಿಡಿದು ‘ಅಮಿತ್ ಶಾ ಗೋಬ್ಯಾಕ್’ ಎಂದು ಪ್ರತಿಭಟನೆ ಮಾಡಿದ್ಧಾರೆ. ಇದರಿಂದ ಆಕ್ರೋಶಗೊಂಡ ಎಬಿವಿಪಿ ಮತ್ತು ಬಿಜೆಪಿ ಕಾರ್ಯಕರ್ತರು ಕಾಲೇಜಿನ ಆವರಣಕ್ಕೆ ನುಗ್ಗಿ ಟಿಎಂಸಿಪಿ ಕಾರ್ಯಕರ್ತರೊಂದಿಗೆ ಘರ್ಷಣೆಗಿಳಿದ್ದಾರೆ. ಈ ವೇಳೆ 15 ಮಂದಿಗೆ ಗಾಯಗಳಾಗಿವೆ. ಸಂಜೆ 5:30ರಿಂದ 7 ಗಂಟೆಯ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ತಿಳಿದುಬಂದಿದೆ.
“ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಕಾಲೇಜಿಗೆ ನುಗ್ಗಿ ಅದರ ಆಸ್ತಿಯನ್ನು ಹಾನಿಗೊಳಿಸುತ್ತಾರೆಂದರೆ ಏನರ್ಥ? ಇತ್ತೀಚಿನ ವರ್ಷಗಳಲ್ಲಿ ಇಂಥ ಘಟನೆಯನ್ನು ನಾನು ಕಂಡಿರಲಿಲ್ಲ. ಅವರು ಮೇಜು ಕುರ್ಚಿಗಳನ್ನಷ್ಟೇ ಒಡೆದು ಹಾಕಿಲ್ಲ, ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನೂ ಹಾಳು ಮಾಡಿದ್ದಾರೆ… ಒಂದು ಲ್ಯಾಪ್ಟಾಪ್ ಹೊತ್ತೊಯ್ದಿದ್ದಾರೆ. ಮಹಿಳಾ ಸಿಬ್ಬಂದಿಯ ಹ್ಯಾಂಡ್ ಬ್ಯಾಗನ್ನೂ ಅವರು ಬಿಟ್ಟಿಲ್ಲ. ಇದು ನಾಚಿಕೆಗೇಡಿನ ಘಟನೆಯಾಗಿದೆ. ನಾವು ಬಿಜೆಪಿಯವರ ವಿರುದ್ಧ ಪೊಲೀಸರಲ್ಲಿ ದೂರು ಕೊಡುತ್ತೇವೆ” ಎಂದು ವಿದ್ಯಾಸಾಗರ್ ಕಾಲೇಜು ಪ್ರಾಂಶುಪಾಲ ಗೌತಮ್ ಕುಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಹಿಂಸಾಚಾರಗಳಿಗೆ ತೃಣಮೂಲ ಕಾಂಗ್ರೆಸ್ಸಿಗರೇ ಕಾರಣ ಎಂದು ಬಿಜೆಪಿ ಆರೋಪ ಮಾಡಿದೆ. ಟಿಎಂಸಿ ಗೂಂಡಾಗಳು ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದರು. ಮಮತಾ ಬ್ಯಾನರ್ಜಿ ಅವರು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡಲು ಪ್ರಯತ್ನಿಸಿದರು. ಪೊಲೀಸರೂ ಕೂಡ ಮೂಕ ಪ್ರೇಕ್ಷಕರಂತಿದ್ದರು. ಆದರೆ, ನಾನು ಸುರಕ್ಷಿತವಾಗಿದ್ದೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇತ್ತ, ಮಮತಾ ಬ್ಯಾನರ್ಜಿ ಅವರು ಹಿಂಸಾಚಾರ ನಡೆಸಿದ ಬಿಜೆಪಿಯ ಗೂಂಡಾಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ವಿದ್ಯಾಸಾಗರ್ ಅವರ ಪ್ರತಿಮೆನ್ನು ಒಡೆದುಹಾಕಿದ ಯಾರನ್ನೇ ಆದರೂ ನಾನು ಬಿಡುವುದಿಲ್ಲ. ದೆಹಲಿಯಲ್ಲಿ ಬಂದೂ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಮತಾ ಬ್ಯಾನರ್ಜಿ ವಾರ್ನಿಂಗ್ ಕೊಟ್ಟಿದ್ದಾರೆ.