ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬದುಕು ಭ್ರಷ್ಟಚಾರಿ ನಂಬರ್ 1 ಎಂಬ ಹಣೆಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂದ ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಯುವಕನೋರ್ವ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. “ಜನರ ಭಾವನೆಗಳಿಗೆ ಘಾಸಿ ಮಾಡುವ ಹೇಳಿಕೆಗಳನ್ನು ಮತ್ತೊಮ್ಮೆ ನೀಡದಂತೆ ಪ್ರಧಾನಿಗೆ ಸೂಚಿಸಿ” ಎಂದು ಆಯೋಗಕ್ಕೆ ಅಮೇಥಿ ಯುವಕನೋರ್ವ ರಕ್ತದಿಂದ ಪತ್ರ ಬರೆದು ಕಳುಹಿಸಿದ್ದಾನೆ.
ಅಮೇಥಿಯ ಶಾಹಘರ್ ಮೂಲದ ಮನೋಜ್ ಕಶ್ಯಪ್ ಎಂಬ ಯುವಕ ಈ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಜೀವ್ ಗಾಂಧಿ ಬಗ್ಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆ ನನಗೆ ತೀವ್ರ ನೋವುಂಟು ಮಾಡಿದೆ. ದೇಶಕ್ಕೆ ರಾಜೀವ್ ಗಾಂಧಿಯವರ ಕೊಡುಗೆ ಹೆಚ್ಚೇ ಇದೆ. ಮತದಾನ ಮಾಡಲು ಅರ್ಹವಾಗುವ ವಯಸ್ಸು 18ಕ್ಕೆ ಇಳಿಕೆ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿ, ದೇಶದಲ್ಲಿ ಕಂಪ್ಯೂಟರ್ ಕ್ರಾಂತಿ ಹೀಗೆ ಸಾಧನೆಗಳ ಪಟ್ಟಿ ದೊಡ್ಡದಿದೆ ಎಂದು ಉಲ್ಲೇಖಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ರಾಜೀವ್ ಗಾಂಧಿ ಅವರನ್ನು ಲೇಖನವೊಂದರಲ್ಲಿ ಶ್ಲಾಘಿಸಿದ್ದಾರೆ. ಹೀಗೆ ದೇಶದ ಜನತೆ ಹೃದಯದಲ್ಲಿ ರಾಜೀವ್ ಗಾಂಧಿ ನೆಲೆಸಿದ್ದಾರೆ. ಇಂತಹ ನಾಯಕರಿಗೆ ಅವಮಾನ ಮಾಡುವರು, ಅವರನ್ನು ಕೊಂದ ಪಾಪಿಗಳಿಗೆ ಸಮ ಎಂದು ಅಮೇಥಿ ಜನ ಭಾವಿಸುತ್ತಾರೆ. ಇನ್ನೊಮ್ಮೆಈ ರೀತಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಪ್ರಧಾನಿಗೆ ಸೂಚಿಸಬೇಕು” ಎಂದು ಪತ್ರದಲ್ಲಿ ಆಯೋಗಕ್ಕೆ ಮನವಿ ಮಾಡಿದ್ದಾರೆ.
ರಾಜೀವ್ ಗಾಂಧಿಯವರ ಜೊತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ. ನನ್ನ ಪತ್ರದ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಕಶ್ಯಪ್ ಹೇಳಿಕೊಂಡಿದ್ದಾರೆ. ಅಲ್ಲದೇ ಸದ್ಯ ಕಾಂಗ್ರೆಸ್ ಎಂಎಲ್‍ಸಿ ದೀಪಕ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪತ್ರ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.