ಬೆಂಗಳೂರು: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗು ತೀವ್ರವಾಗುತ್ತಿದೆ.
ಇದಕ್ಕೆ ಸಾಕ್ಷಿಯಾಗಿ ಮೈಲಾರದಲ್ಲಿ ನಡೆದ ಸಮಾರಂಭದಲ್ಲಿ ಸಭಿಕರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ ಮುಂದೆ ಚುನಾವಣೆ ನಡೆದ ಬಳಿಕ ನೋಡುವ ಎಂದರು.
ನನ್ನ ಆಶೀರ್ವಾದ ಇದೆ
ಕನಕ ಗುರು ಪೀಠದ ನಿರಂಜನಾನಂದ ಸ್ವಾಮೀಜಿ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ , ಸರ್ವರಿಗೂ ಸಮಪಾಲು ಸಮಬಾಳು ಕೊಡುವ ಧೀಮಂತ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದರೆ ಸಂತಸ. ನನ್ನ ಆಶೀರ್ವಾದ ಇದೆ.ನಾನು ಒತ್ತಾಯ ಮಾಡುತ್ತಿಲ್ಲ, ನಾಡಿನ ಜನತೆಗೆ ತಪ್ಪು ಮಾಡಿದ್ದೇವೆ ಎನ್ನುವುದು ಅರಿವಾಗಿದೆ. ಜನತೆಗೆ ಮುಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಭಾವನೆ ಮೂಡಿದೆ ಎಂದರು.
5 ವರ್ಷ ಕುಮಾರಸ್ವಾಮಿಯೇ ಸಿಎಂ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ , ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸುತ್ತಾರೆ. ಸಿದ್ದರಾಮಯ್ಯ ಅವರು ಸಿಎಂ ಆಗುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಗೃಹ ಸಚಿವ ಎಂ.ಬಿ.ಪಾಟೀಲ್, ಶಾಸಕ ಡಾ.ಸುಧಾಕರ್ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದಿದ್ದರು. ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿ ಈಗ ಕುರ್ಚಿ ಖಾಲಿ ಇಲ್ಲ. ಕುಮಾರಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದರು.