ರಾಷ್ಟ್ರೀಯ

ಆಪ್​​, ಎಸ್​​ಪಿ-ಬಿಎಸ್​​ಪಿ ಬಿಟ್ಟು ಬಿಜೆಪಿ ವಿರುದ್ಧ ಪ್ರಚಾರ ಮಾಡಿ’; ಕಾಂಗ್ರೆಸ್​​ಗೆ ಸಿಎಂ ಕೇಜ್ರಿವಾಲ್​​ ಸಲಹೆ

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರಿಗೆ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಸಲಹೆಯೊಂದನ್ನು ನೀಡಿದ್ದಾರೆ. “ಪ್ರಿಯಾಂಕಾ ಗಾಂಧಿ ದೆಹಲಿಯಲ್ಲಿ ಪ್ರಚಾರ ಮಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲಿಗೆ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿ ಏರ್ಪಡಲಿರುವ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪ್ರಚಾರ ಮಾಡಿದರೇ ಒಳ್ಳೆಯದು” ಎಂದು ಆಪ್​​ ಮುಖ್ಯಸ್ಥ ಕಿವಿಮಾತು ಹೇಳಿದ್ದಾರೆ.

ದೆಹಲಿ ಎಎಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಅರವಿಂದ್​​ ಕೇಜ್ರಿವಾಲ್​,​ ಪ್ರಿಯಾಂಕ ಗಾಂಧಿ ಇಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದಲ್ಲಿಯೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ), ಸಮಾಜವಾದಿ ಪಕ್ಷ (ಎಸ್‍ಪಿ) ವಿರುದ್ಧ ಪ್ರಚಾರ ಮಾಡಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ನಿತ್ಯ ತಮ್ಮ ಎದುರಾಳಿ ಎನ್ನುವ ಬಿಜೆಪಿ ವಿರುದ್ಧ ಯಾಕೇ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಹಾಗೆಯೇ ಆಪ್​​ ಮತ್ತು ಎಸ್​​ಪಿ-ಬಿಎಸ್​​ಪಿ ವಿರುದ್ಧ ಕಾಂಗ್ರೆಸ್​ ವರಿಷ್ಠರು ಯಾಕೇ ಪ್ರಚಾರ ಮಾಡುತ್ತಿದ್ಧಾರೆ ಎಂದು ಗೊತ್ತಿದೆ. ರಾಹುಲ್​​ ಗಾಂಧಿಯವರಿಗಾಗಲೀ ಮತ್ತು ಪ್ರಿಯಾಂಕಾ ಅವರಿಗಾಗಲೀ ಬಿಜೆಪಿ ವಿರುದ್ಧ ನೇರವಾಗಿ ಪ್ರಚಾರ ಮಾಡುವ ಮನಸ್ಸಿಲ್ಲ ಎಂದು ದೂರಿದರು.

ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಇಲ್ಲಿನ ಭೋಪಾಲ್, ಸಾಗರ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳಿಗೆ ಮೇ 19ರಂದು ಮತದಾನ ನಡೆಯಲಿದೆ ಎನ್ನಲಾಗಿದೆ.

ಜತೆಗೆ ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್​, ಆಪ್​​ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಇಲ್ಲಿನ ಎಲ್ಲ ಕ್ಷೇತ್ರಗಳ ಮತದಾನವೂ ಮೇ 19ರಂದು ನಡೆಯಲಿದ್ದು, ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

Comments are closed.